ಪುಣೆ(ಮಹಾರಾಷ್ಟ್ರ): ಬಾಲಿವುಡ್ ಜನಪ್ರಿಯ ನಟ ನಾನಾ ಪಾಟೇಕರ್, ಮುಂಬೈ ಡಾನ್ ಮಾನ್ಯ ಸುರ್ವೆ ಹಾಗೂ ತಮ್ಮ ಕುರಿತಾದ ಆಶ್ಚರ್ಯಕರ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.
ಭೂಗತ ದೊರೆ ಡಾನ್ ಮಾನ್ಯ ಸುರ್ವೆ ತನ್ನ ತಾಯಿ ಕಡೆಗಿನ ಸಂಬಂಧಿ ಎಂಬುದನ್ನು ನಾನಾ ಪಾಟೇಕರ್ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಭೂಗತ ಲೋಕದಲ್ಲಿ ಭಾಗಿಯಾಗಿಸಲು ಒಂದೊಮ್ಮೆ ನನ್ನ ತಾಯಿಯೇ ನನ್ನನ್ನು ಮಹಾರಾಷ್ಟ್ರದ ಕೊಂಕಣಿ ಪ್ರದೇಶದ ಮುರುದ್ಗೆ ಕರೆದೊಯ್ದಿದ್ದರು ಎಂಬ ಟಾಪ್ ಸೀಕ್ರೆಟ್‌ನ್ನೂ ಎಲ್ಲರ ಮುಂದಿಟ್ಟರು.
ಚಿಂಚವಾಡ ಜಿಲ್ಲೆ ಪಿಂಪ್ರಿಯ ಕಲಾರಂಗ್ ಸಾಂಸ್ಕೃತಿಕ ಕಲಾ ಸಂತ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಈ ಕುತೂಹಲಕಾರಿ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.
ಹಾಗಾದ್ರೆ, ಯಾರು ಈ ಮನೋಹರ್ ಅರ್ಜುನ್ ಸುರ್ವೆ?
'ಮಾನ್ಯ ಸುರ್ವೆ' ಎಂದೇ ಕುಖ್ಯಾತಿ ಹೊಂದಿರುವ ಈತ ಒಂದು ಕಾಲದಲ್ಲಿ ಮುಂಬೈ ಭೂಗತ ಲೋಕವನ್ನು ಆಳಿದವನು. ತನ್ನ ಕಾಲೇಜು ವ್ಯಾಸಂಗದ ದಿನಗಳಲ್ಲಿ ಪ್ರತಿ ವಿಚಾರಗಳಲ್ಲೂ ಧೈರ್ಯವಾಗಿ ಮುನ್ನುಗ್ಗುತ್ತಿದ್ದ ಸುರ್ವೆ, ಕಾರ್ಯತಂತ್ರಗಳನ್ನು ರೂಪಿಸುವುದರಲ್ಲೂ ಚಾಣಾಕ್ಷನಾಗಿದ್ದನಂತೆ. ಪದವಿ ಓದುತ್ತಿದ್ದಾಗ ಮಾಡದ ಕೊಲೆ ಪ್ರಕರಣವೊಂದರಲ್ಲಿ ಸಿಲುಕಿದ ಸುರ್ವೆ ಯರವಡಾ ಜೈಲಿನಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಅಲ್ಲಿಂದಲೇ ಈತನನ್ನು ಭೂಗತ ಲೋಕ ಕೈಬೀಸಿ ಕರೆಯಿತು. ಹೀಗೆ ಸಾಗುತ್ತಾ ಮುಂದೊಂದಿನ ಈತ ಅದೆಷ್ಟರ ಮಟ್ಟಿಗೆ ಬೇಡಿಕೆಯ ಡಾನ್ ಆಗಿದ್ದ ಎಂದರೆ, ದಶಕಗಳಿಂದ ಭೂಗತ ಜಗತ್ತನ್ನು ಆಳಿದ ಪಠಾಣ್‌ಗಳು, ತಮ್ಮ ವಿರೋಧಿ ಗ್ಯಾಂಗ್ 'ಡಿ' ಕಂಪನಿಯ ನಾಯಕರಾದ ಕಾಸ್ಕರ್ ಸಹೋದರರನ್ನು ಕೊಲೆ ಮಾಡಲು ಈತನ ಸಹಾಯ ಕೋರಿದ್ದರಂತೆ.
1982 ರಲ್ಲಿ ಮಹಾರಾಷ್ಟ್ರ ಪೊಲೀಸರು ಸುರ್ವೆಯನ್ನು ಶೂಟೌಟ್‌ನಲ್ಲಿ ಸಾಯಿಸಿದ್ದು, ಇದನ್ನು ನಗರದ ಮೊದಲ ಎನ್ಕೌಂಟರ್ ಹತ್ಯೆ ಎಂದು ಪರಿಗಣಿಸಲಾಗಿದೆ.