ನವದೆಹಲಿ: ಫೇಸ್ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ಗಳ ಪೂರೈಕೆ ದೇಶದಲ್ಲಿ ಸಾಕಷ್ಟಿರುವುದರಿಂದ ಅವುಗಳನ್ನು 1955 ರ ಅಗತ್ಯ ಸರಕು ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಲೀನಾ ನಂದನ್ ಹೇಳಿದ್ದಾರೆ.
ಮಾರ್ಚ್ 13 ರಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಮುಂದಿನ 100 ದಿನಗಳವರೆಗೆ ಫೇಸ್ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ಗಳನ್ನು ಅಗತ್ಯ ಸರಕುಗಳೆಂದು ಘೋಷಿಸಿತ್ತು. ಆದರೆ ದೇಶದಲ್ಲಿ ಅವುಗಳ ಪೂರೈಕೆ ಸಾಕಷ್ಟಿದ್ದು, ಮತ್ತೆ ಈ ಅವಧಿಯನ್ನು ವಿಸ್ತರಿಸುವುದಿಲ್ಲ. ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕವೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಲೀನಾ ನಂದನ್ ತಿಳಿದರು.
ಮಾಸ್ಕ್ಗಳು (2-ಪ್ಲೈ ಮತ್ತು 3-ಪ್ಲೈ ಸರ್ಜಿಕಲ್ ಮಾಸ್ಕ್, ಎನ್-95 ಮಾಸ್ಕ್) ಮತ್ತು ಹ್ಯಾಂಡ್ ಸ್ಯಾನಿಟೈಸರ್ಗಳನ್ನು ಅಗತ್ಯ ಸರಕುಗಳ ಕಾಯ್ದೆಯಡಿ ತರಲಾಗಿದೆ. ಕಾಳ ಸಂತೆಯನ್ನು ತಡೆಗಟ್ಟುವ ಉದ್ದೇಶದಿಂದ ಈ ವಸ್ತುಗಳ ಉತ್ಪಾದನೆ, ವಿತರಣೆ ಮತ್ತು ಬೆಲೆಗಳನ್ನು ನಿಯಂತ್ರಿಸಲು ರಾಜ್ಯಗಳಿಗೆ ಅಧಿಕಾರ ನೀಡಲಾಗಿದೆ.