ಹೈದರಾಬಾದ್ (ತೆಲಂಗಾಣ): ಮಾಜಿ ಹಾಕಿ ಆಟಗಾರ ಪ್ರವೀಣ್ ರಾವ್ ಹಾಗೂ ಅವರ ಸಂಬಂಧಿಗಳ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶದ ಮಾಜಿ ಸಚಿವೆ ಭೂಮಾ ಅಖಿಲಪ್ರಿಯಾ ಹಾಗೂ ಆಕೆಯ ಪತಿ ಭಾರ್ಗವ್ ರಾಮ್ರನ್ನು ಬಂಧಿಸಲಾಗಿದೆ ಎಂದು ತೆಲಂಗಾಣ ಪೊಲೀಸರು ಮಾಹಿತಿ ನೀಡಿದ್ದಾರೆ.
ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರವಿದ್ದಾಗ ಭೂಮಾ ಅಖಿಲಪ್ರಿಯಾ ಪ್ರವಾಸೋದ್ಯಮ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು.
ಭೂ ವಿವಾದ ಹಿನ್ನೆಲೆಯಲ್ಲಿ ಮಂಗಳವಾರ ಮಾಜಿ ಹಾಕಿ ಆಟಗಾರನಾದ ಪ್ರವೀಣ್ ರಾವ್ ಹಾಗೂ ಆತನ ಇಬ್ಬರು ಸಂಬಂಧಿಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಎಂದು ಹೇಳಿಕೊಂಡು ಮನೆಗೆ ನುಗ್ಗಿದ್ದ 15 ಮಂದಿಯ ತಂಡ ಅವರನ್ನು ಅಪಹರಣ ಮಾಡಿತ್ತು.
ಇದನ್ನೂ ಓದಿ : ಜೈಪುರದಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು
ಅಪಹರಣಕ್ಕೂ ಮುನ್ನ ಕೆಲವೊಂದು ದಾಖಲೆಗಳಿಗೆ ಸಹಿ ಹಾಕಿಸಿಕೊಂಡಿತ್ತು ಎಂದು ಸಂಬಂಧಿಗಳು ಆರೋಪಿದ್ದರು. ಮತ್ತೊಬ್ಬ ಕುಟುಂಬ ಸದಸ್ಯ ಪ್ರತಾಪ್ ರಾವ್ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಿದ್ದಂತೆ ತನಿಖೆ ಆರಂಭಿಸಿದ ಪೊಲೀಸರು, ಬುಧವಾರ ಮುಂಜಾನೆ 3 ಗಂಟೆ ವೇಳೆಗೆ ಹೈದರಾಬಾದ್ನ ಶೈಖ್ ಪೇಟ್ನಲ್ಲಿ ಪ್ರವೀಣ್ ರಾವ್ ಮತ್ತು ಇಬ್ಬರು ಸಂಬಂಧಿಗಳನ್ನು ರಕ್ಷಣೆ ಮಾಡಿದ್ದರು.
ಬುಧವಾರವಷ್ಟೇ ಪೊಲೀಸರು ಭೂಮಾ ಅಖಿಲಪ್ರಿಯಾ ಅವರನ್ನು ವಿಚಾರಣೆ ನಡೆಸಿದ್ದು, ಆಕೆಯ ಪತಿ ಭಾರ್ಗವ್ ರಾಮ್ ಪರಾರಿಯಾಗಿದ್ದ. ಈಗ ಅವರಿಬ್ಬರನ್ನೂ ಪ್ರವೀಣ್ ರಾವ್ ಅಪಹರಣ ಕೇಸ್ನಲ್ಲಿ ಬಂಧಿಸಲಾಗಿದೆ ಎಂದು ಹೈದರಾಬಾದ್ ಪೊಲೀಸ್ ಕಮೀಷನರ್ ಅಂಜನಿಕುಮಾರ್ ತಿಳಿಸಿದ್ದಾರೆ.
ಸದ್ಯಕ್ಕೆ ಅಖಿಲಪ್ರಿಯಾ ಅವರನ್ನು ಮೊದಲ ಆರೋಪಿಯಾಗಿ, ಸುಬ್ಬಾರೆಡ್ಡಿ ಎಂಬುವರನ್ನು ಎರಡನೇ ಆರೋಪಿಯಾಗಿ, ಮೂರನೇ ಆರೋಪಿಯಾಗಿ ಭಾರ್ಗವ್ ರಾಮ್ ಅವರನ್ನು ಗುರ್ತಿಸಿ, ವಿಚಾರಣೆ ನಡೆಸಲಾಗುತ್ತಿದೆ.