ನವದೆಹಲಿ: ದೇಶದೆಲ್ಲೆಡೆ ಚಳಿಯೋ ಚಳಿ. ಬಿಸಿಲು ಯಾವಾಗ ಬೀಳುತ್ತೇ ಅಂತಾ ಕಾಯ್ತಾ ಇದ್ದಾರೆ. ಈ ತಣ್ಣನೆ ಗಾಳಿಯ ಪ್ಲಸ್- ಮೈನಸ್ಗಳ ಆಟಕ್ಕೆ ಬೇಸಿಗೆ ಬೇಗೆನೆ ಬರಲಿ ಎಂದು ಪ್ರಾರ್ಥಿಸುವವರ ಸಂಖ್ಯೆ ಹೆಚ್ಚುತ್ತಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದಿನದ ಕನಿಷ್ಠ ತಾಪಮಾನವೇ 5 ಡಿಗ್ರಿ ಸೆಲ್ಸಿಯಸ್ಗೆ ಕುಸಿತವಾಗಿದೆ. ಒಟ್ಟಾರೆ ಉತ್ತರ ಭಾರತದಲ್ಲಿ ನಿನ್ನೆಯ ಮತ್ತು ಇಂದಿನ ಶೀತಲ ತರಂಗಗಳನ್ನು ಗಮನಿಸುವುದಾದರೆ, ಉತ್ತರ ಅಫ್ಘಾನಿಸ್ತಾನ ಮತ್ತು ಅಕ್ಕ ಪಕ್ಕದ ಪ್ರದೇಶದ ಮೇಲೆ ತಣ್ಣನೆಯ ಗಾಳಿ ಸಹಿತ ಮಳೆಯ ಸೂಚನೆಯಿದ್ದು, ಇದು ಜನವರಿ 11 ರ ರಾತ್ರಿ ಪಶ್ಚಿಮ ಹಿಮಾಲಯದ ಮೇಲೆ ತನ್ನ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬಿಹಾರ, ಜಾರ್ಖಂಡ್, ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ ಮತ್ತು ತ್ರಿಪುರದ ಕೆಲವು ಭಾಗಗಳಲ್ಲಿ ಲಘು ಮಳೆಯಾಗಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ವಿದರ್ಭ ಮತ್ತು ಛತ್ತೀಸ್‌ಗಢದ ಅನೇಕ ಭಾಗಗಳಲ್ಲಿ ಕನಿಷ್ಠ 4-6 ಡಿಗ್ರಿ ಸೆಲ್ಸಿಯಸ್ ಮತ್ತು ರಾಜಸ್ಥಾನ, ದೆಹಲಿ, ಬಿಹಾರ ಮತ್ತು ಜಾರ್ಖಂಡ್‌ನಲ್ಲಿ 2-3 ಡಿಗ್ರಿಗಳಷ್ಟು ತಾಪಮಾನ ದಾಖಲಾಗಿದೆ. ಇದರಿಂದ ಜನ ತೀವ್ರ ತೊಂದರೆಗೊಳಗಾಗಿದ್ದಾರೆ. ಮನೆ ಬಿಟ್ಟು ಹೊರ ಬಾರದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಹಿಮಾಚಲ ಪ್ರದೇಶವಂತೂ ಈ ಬಾರಿ ಚಳಿಯಿಂದ ತತ್ತರಿಸಿ ಹೋಗಿದ್ದಾರೆ. 900 ಕ್ಕೂ ಹೆಚ್ಚು ರಸ್ತೆಗಳು ಹಿಮದಿಂದ ಆವೃತವಾಗಿದೆ. ಇನ್ನು ಕುಲು ಜಿಲ್ಲೆಯ ಮನಾಲಿಯಲ್ಲಿ ಕನಿಷ್ಠ ತಾಪಮಾನ ಮೈನಸ್ -7.6 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದೆ. ಮತ್ತೊಂದು ಕಡೆ ಕಿನ್ನೌರ್ ಅವರಕಲ್ಪ ಮತ್ತು ಶಿಮ್ಲಾ ತಾಪಮಾನವು ಮೈನಸ್ 1.3 ಡಿಗ್ರಿಗೆ ಇಳಿಕೆ ಕಂಡಿದೆ. ಕುಫ್ರಿಯಲ್ಲಿ ಮೈನಸ್ 2.6 ಡಿಗ್ರಿ ಸೆಲ್ಸಿಯಸ್, ಪಾಲಂಪೂರ್ ಮೈನಸ್ 1 ಡಿಗ್ರಿ ಸೆಲ್ಸಿಯಸ್ ದಾಖಲಿಸಿದೆ.