ಜೈಪುರ್(ರಾಜಸ್ಥಾನ): ಕೊರೊನಾ ವೈರಸ್ ಹರಡುವ ಭೀತಿಯಿಂದ ಇಡೀ ದೇಶ ಲಾಕ್‌ಡೌನ್ ಆಗಿದೆ. ಪರಿಣಾಮ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಆದರೆ ಕೂಲಿಗಾಗಿ ಬೇರೆ ಬೇರೆ ಕಡೆ ವಲಸೆ ಹೋಗಿದ್ದ ಜನರು ಸಾರಿಗೆ ಇಲ್ಲದೆ ಸರಕು ವಾಹನ, ಕಾಲ್ನಡಿಗೆ ಮೂಲಕ ತಮ್ಮ ತಮ್ಮ ಊರುಗಳತ್ತ ಹೋಗುತ್ತಿದ್ದಾರೆ.
ಕೆಲವೆಡೆ ಅನ್ನ, ನೀರು ಇಲ್ಲದೆ ಇರೋದನ್ನು ನೋಡಿದರೆ ಎಂಥವರ ಮನಸ್ಸೂ ಕರಗುತ್ತದೆ. ಸರ್ಕಾರ ಆರ್ಥಿಕ ಪರಿಹಾರವನ್ನು ಘೋಷಿಸಿದೆ. ಈ ಕುರಿತು ಜೈಪುರದ ಈಟಿವಿ ಭಾರತ ವಾಸ್ತವ ಸ್ಥಿತಿ ಅರಿಯಲು ಫೀಲ್ಡಿಗಿಳಿದಾಗ ಜನ ಹಸಿವಿನಿಂದ ತಮ್ಮ ಊರಿನತ್ತ ಹೋಗುತ್ತಿರುವುದು ತಿಳಿದು ಬಂದಿದೆ. ಜೈಪುರದ ಈಟಿವಿ ಭಾರತ ಹಿರಿಯ ವರದಿಗಾರರೊಬ್ಬರು ಟ್ರಕ್‌ವೊಂದನ್ನ ತಡೆದು ವಿಚಾರಿಸಿದಾಗ ಕೂಲಿ ಕಾರ್ಮಿಕರು ಗುಜರಾತ್‌ನಿಂದ ಆಗ್ರಾಗೆ ಹೋಗುತ್ತಿದ್ದು ಗಮನಕ್ಕೆ ಬಂದಿದೆ. ಕಾರ್ಮಿಕರನ್ನ ಮಾತಿಗೆಳೆದಾಗ, ಭರತ್‌ಪುರ್, ದೋಲ್‌ಪುರ್, ಆಗ್ರ ಮತ್ತು ಮಥುರಾಗೆ ಹೋಗುತ್ತಿದ್ದೇವೆ. ಜೊತೆಗೆ ಕಳೆದ ಬುಧವಾರದಿಂದ ಊಟ, ನೀರು ಇಲ್ಲದೆ, ಹಸಿವಿನಿಂದಲೇ ಪ್ರಯಾಣ ಮಾಡುತ್ತಿರವುದಾಗಿ ತಮ್ಮ ಅಸಹಾಯಕತೆ ವಿವರಿಸಿದ್ದಾರೆ.
ಕೂಡಲೇ ಎಚ್ಚೆತ್ತ ಈಟಿವಿ ಭಾರತ ತಂಡ, ಜೈಪುರ ಠಾಣೆಗೆ ಮಾಹಿತಿ ನೀಡಿ ಪೊಲೀಸರ ನೆರವಿನಿಂದ ಹಸಿದವರಿಗೆ ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಿದೆ. ಇಡೀ ದೇಶ ಲಾಕ್‌ಡೌನ್ ಆದಾಗಿನಿಂದ ಈಟಿವಿ ಭಾರತ ಅವಶ್ಯಕತೆ ಇರುವವರ ನೆರವಿಗೆ ಧಾವಿಸುವ ಮೂಲಕ ತನ್ನ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ.