ನವದೆಹಲಿ: ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಸೃಷ್ಟಿಯಾದ ಲಾಕ್ಡೌನ್ ವೇಳೆ ದೇಶದ ಜನರಿಗೆ ನಿರಂತರ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗದಂತೆ ನಿಗಾವಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕೋವಿಡ್-19 ವೈರಸ್ ಪರಿಣಾಮ ದೇಶದಲ್ಲಿ ಸಾಕಷ್ಟು ಸಮಸ್ಯೆ ಉದ್ಭವಿಸಿದ್ದು, ಇದರ ಹಿನ್ನೆಲೆಯಲ್ಲಿ ಸುಸ್ಥಿರತೆ, ಸ್ಥಿತಿಸ್ಥಾಪಕತ್ವ ಮತ್ತು ದಕ್ಷತೆಯನ್ನು ಹೆಚ್ಚಿಸುವ ಸಂಬಂಧ ಹಲವು ದೀರ್ಘಕಾಲೀನ ಸುಧಾರಣೆಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದರು.
ಆರ್ಥಿಕತೆ ಮುನ್ನಡೆಸುವಲ್ಲಿ ವಿದ್ಯುತ್ ಕ್ಷೇತ್ರದ ಮಹತ್ವವೆಂದು ಒತ್ತಿ ಹೇಳಿದರು. ಇದೇ ವೇಳೆ, ಖಾಸಗಿ ಹೂಡಿಕೆದಾರರನ್ನು ಆಕರ್ಷಿಸಲು ಈಗಿನ ಒಪ್ಪಂದಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಅಗತ್ಯವಿದೆ.
ವಿತರಣಾ ಕಂಪನಿಗಳು ತಮ್ಮ ಕಾರ್ಯ ಸಾಧ್ಯತೆ ಸುಧಾರಿಸುವ ಕ್ರಮಗಳು, ತೆರಿಗೆ ತರ್ಕ ಬದ್ಧಗೊಳಿಸುವಿಕೆ ಮತ್ತು ಸಕಾಲಿಕ ವೇಳೆ ಸಬ್ಸಿಡಿ ಬಿಡುಗಡೆಯಂತಹ ಆಡಳಿತ ಸುಧಾರಿತ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
ಸುಲಭ ವ್ಯವಹಾರ, ನವೀಕರಿಸಬಹುದಾದ ಇಂಧನಗಳ ಬಗ್ಗೆ ಜನತೆಗೆ ತಿಳಿವಳಿಕೆ, ನಿರಂತರ ಕಲ್ಲಿದ್ದಲು ಪೂರೈಕೆ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಪಾತ್ರ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿಸುವ ಕುರಿತು ಪರಿಶೀಲನೆ ನಡೆಸುವಂತೆ ಸೂಚಿಸಿದರು.
ಸಭೆಯಲ್ಲಿ ಕೇಂದ್ರದ ವಿವಿಧ ಸಚಿವರು, ರಾಜ್ಯ ಖಾತೆಗಳ ಸಚಿವರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.