ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡೆಕ್ಕನ್ ಕ್ರೋನಿಕಲ್ ಹೋಲ್ಡಿಂಗ್ಸ್ ಲಿಮಿಟೆಡ್ (DCHL) ಹಾಗೂ ಆ ಕಂಪನಿಯ ಮಾಜಿ ಪ್ರಾಯೋಜಕರಿಗೆ ಸೇರಿದ 122.15 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ನವದೆಹಲಿ, ಹೈದರಾಬಾದ್, ಗುರಗಾಂವ್, ಚೆನ್ನೈ, ಬೆಂಗಳೂರು ಸೇರಿದಂತೆ ಹಲವೆಡೆ ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ (NCLT) ಪ್ರಕ್ರಿಯೆಗೆ ಒಳಪಡದ ಸುಮಾರು 14 ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಆಸ್ತಿಗಳು ಡಿಜಿಸಿಎಲ್ ಹಾಗೂ ಅದರ ಮಾಜಿ ಪ್ರಾಯೋಜಕರಾದ ಟಿ. ವೆಂಕಟರಾಮ್ ರೆಡ್ಡಿ, ಟಿ.ವಿನಾಯಕ್ ರವಿ ರೆಡ್ಡಿ ಅವರಿಗೆ ಸೇರಿದ್ದಾಗಿದೆ.
ಇದು ಎರಡನೇ ಮುಟ್ಟುಗೋಲು ಪ್ರಕರಣವಾಗಿದ್ದು, ಇದಕ್ಕೂ ಮೊದಲು ಕೆಲವೊಂದು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಇದರಿಂದಾಗಿ ಒಟ್ಟು ಮುಟ್ಟುಗೋಲಾದ ಆಸ್ತಿಯ ಮೊತ್ತ 264.56ಕ್ಕೆ ಏರಿಕೆಯಾಗಿದೆ
2015ರಿಂದ ಡೆಕ್ಕನ್ ಕ್ರೋನಿಕಲ್ ಹೋಲ್ಡಿಂಗ್ಸ್ ಲಿಮಿಟೆಡ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಸಿಬಿಐ ಬೆಂಗಳೂರು ಘಟಕದ ಚಾರ್ಜ್ ಶೀಟ್ಗಳು ಹಾಗೂ 6 ಎಫ್ಐಆರ್ಗಳ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
ತೆಲಂಗಾಣದ ಸೆಂಟ್ರಲ್ ಕ್ರೈಮ್ ಸ್ಟೇಷನ್ ಪೊಲೀಸರು ಕೂಡಾ ಮತ್ತೊಂದು ಚಾರ್ಜ್ ಶೀಟ್ ಹಾಕಿದ್ದು, ಸೆಕ್ಯೂರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಕೂಡಾ ಈ ಕಂಪನಿಯ ವಿರುದ್ಧ ಕೆಲವು ಕಾನೂನಾತ್ಮಕ ಕ್ರಮಗಳನ್ನು ಕೈಗೊಂಡಿದೆ.
ಸುಮಾರು 8,180 ಕೋಟಿ ರೂಪಾಯಿ ಸಾಲ ವಂಚನೆಯ ಆರೋಪ ಡೆಕ್ಕನ್ ಕ್ರೋನಿಕಲ್ ಹೋಲ್ಡಿಂಗ್ಸ್ ಲಿಮಿಟೆಡ್ ಹಾಗೂ ಅದರ ಮಾಜಿ ಪ್ರಾಯೋಜಕರ ಮೇಲೆ ಕೇಳಿಬರುತ್ತಿದೆ.