ಮುಂಬೈ: ಯೆಸ್ ಬ್ಯಾಂಕ್ನ ಸಂಸ್ಥಾಪಕ ರಾಣಾ ಕಪೂರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಣಕಾಸು ವಂಚನೆ ಆರೋಪದಡಿ ವಿಚಾರಣೆ ಬಳಿಕ ಇಂದು ನಸುಕಿನ ಜಾವ ಬಂಧಿಸಿದ್ದಾರೆ. ಯೆಸ್ ಬ್ಯಾಂಕ್ ತೀವ್ರ ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿದೆ.
ಶುಕ್ರವಾರ ರಾತ್ರಿ ಕಪೂರ್ ಅವರ ಮನೆ ಮೇಲೆ ಇಡಿ ದಾಳಿ ಮಾಡಿತ್ತು. ಸತತ 20 ಗಂಟೆಗಳ ವಿಚಾರಣೆ, ಪರಿಶೀಲನೆ ಬಳಿಕ ಬ್ಯಾಂಕ್ ಸ್ಥಾಪಕರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಪೂರ್ ಅವರನ್ನು ಇಂದು ಸ್ಥಳೀಯ ಕೋರ್ಟ್ಗೆ ಹಾಜರುಪಡಿಸಿ, ಇಡಿ ಕಸ್ಟಡಿಗೆ ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಯೆಸ್ ಬ್ಯಾಂಕ್ ತನ್ನ ವಸೂಲಾಗದ ಸಾಲದ ಪ್ರಮಾಣದಲ್ಲಿ ಏರಿಕೆಯಿಂದಾಗಿ ತೀವ್ರ ಹಣಕಾಸು ಬಿಕ್ಕಟ್ಟಿಗೆ ಒಳಗಾಯಿತು. ಹಣದ ವಹಿವಾಟಿನ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಇಡಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದೆ.