ನವದೆಹಲಿ: ಕೃಷಿ ಸುಧಾರಣಾ ಮಸೂದೆಗಳ ಕುರಿತ ಚರ್ಚೆಯ ವೇಳೆ ಅಶಿಸ್ತಿನಿಂದ ವರ್ತಿಸಿದ ಆರೋಪದಲ್ಲಿ ರಾಜ್ಯಸಭೆಯ ಪ್ರತಿಪಕ್ಷದ 8 ಮಂದಿ ಸದಸ್ಯರನ್ನು ಒಂದು ವಾರ ಕಾಲ ಅಮಾನತುಗೊಳಿಸಿ ರಾಜ್ಯಸಭಾಧ್ಯಕ್ಷ ಎಂ. ವೆಂಕಯ್ಯನಾಯ್ಡು ಆದೇಶ ಹೊರಡಿಸಿದ್ದಾರೆ.
ಡೆರೇಕ್ ಓ ಬ್ರಿಯಾನ್, ಕೆ.ಕೆ. ರಾಗೇಶ್, ದೋಲಾ ಸೇನ್, ಸೈಯದ್ ನಜೀರ್ ಹುಸೇನ್, ಸಂಜಯ್ ಸಿಂಗ್, ರಾಜೀವ್ ಸತವ್, ರಿಪುನ್ ಬೋರಾ ಮತ್ತು ಇ.ಕರೀಮ್ ಅವರನ್ನು ಒಂದು ವಾರದ ಕಾಲ ಅಮಾನತುಗೊಳಿಸಲಾಗಿದೆ.
ಭಾನುವಾರ ರಾಜ್ಯಸಭೆಯಲ್ಲಿ ಗದ್ದಲ ಸೃಷ್ಟಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ನೋಟಿಸ್ ನೀಡಿದ್ದರು. ಈ ನೋಟಿಸ್ನ ಪರವಾಗಿ ನಿರ್ಧಾರ ತೆಗೆದುಕೊಂಡ ರಾಜ್ಯಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು 8 ಮಂದಿಯನ್ನು ಒಂದು ವಾರ ಕಾಲ ಅಮಾನತು ಮಾಡಿದ್ದಾರೆ.
ರಾಜ್ಯಸಭೆಯ ಗದ್ದಲ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ನಾಯಕರು ಈ ಮೊದಲು ಆಕ್ರೋಶ ವ್ಯಕ್ತಪಡಿಸಿದ್ದರು. ಭಾನುವಾರ ಸಂಜೆ ಎಂ. ವೆಂಕಯ್ಯ ನಾಯ್ಡು ತಮ್ಮ ನಿವಾಸದಲ್ಲಿ ಸಭೆ ನಡೆಸಿ, ಅಶಿಸ್ತು ತೋರಿದ ಸಂಸದರ ವಿರುದ್ಧ ಕ್ರಮ ಕೈಗೊಳ್ಳುವ ಮುನ್ಸೂಚನೆ ನೀಡಿದ್ದರು. ಇದರ ಜೊತೆಗೆ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದರ ಜೊತೆಗೆ ಉಪಾಧ್ಯಕ್ಷ ಹರಿವಂಶ ರಾಯ್ ವಿರುದ್ಧ ಪ್ರತಿಪಕ್ಷ ಸಂಸದರು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯನ್ನು ರಾಜ್ಯಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ತಿರಸ್ಕರಿಸಿದ್ದಾರೆ.