ನವದೆಹಲಿ: ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ (ಎಂಎಸ್‌ಸಿಬಿ) ಹಗರಣ ಪ್ರಕರಣದಲ್ಲಿ ಅಕ್ರಮ ಹಣ ವಹಿವಾಟು ಆರೋಪದ ಮೇಲೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹಾಗೂ ಅವರ ಸೋದರಳಿಯ, ಮಾಜಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧ ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸಿಕೊಂಡಿದೆ.
ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್‌ಗೆ ಸಂಬಂಧಿಸಿದ 25,000 ಕೋಟಿ ರೂ.ಗಳ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಸಹಕಾರಿ ಬ್ಯಾಂಕ್ನ 70 ಮಾಜಿ ಕಾರ್ಯಕಾರಿಗಳ ಮೇಲೆಯೂ ಕೂಡ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
21ನೇ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮುನ್ನ ಶರದ್ ಪವಾರ್ ವಿರುದ್ಧ ಈ ಪ್ರಕರಣ ದಾಖಲಾಗಿದೆ. ಹಾಗೆಯೇ ಇಡಿಯಿಂದ ಇನ್ನು ಕೆಲವೇ ದಿನಗಳಲ್ಲಿ ಪ್ರಕರಣ ಸಂಬಂಧ ಹೇಳಿಕೆ ಪಡೆಯಲು ಸಮನ್ಸ್ ಜಾರಿಯಾಗುವ ಸಾಧ್ಯತೆ ಇದೆ.
ಇಡಿ ಪ್ರಕರಣದ ಆರೋಪಿಗಳಾದ ದಿಲಿಪ್ರಾವ್ ದೇಶ್ಮುಖ್, ಇಶರ್ಲಾಲ್ ಜೈನ್, ಜಯಂತ್ ಪಾಟೀಲ್, ಶಿವಾಜಿ ರಾವ್, ಆನಂದ್ ರಾವ್ ಆಡ್ಸುಲ್, ರಾಜೇಂದ್ರ ಶಿಂಗಾನೆ ಮತ್ತು ಮದನ್ ಪಾಟೀಲ್ ಸೇರಿದ್ದಾರೆ. ಈ ಸಂಬಂಧ ಕಳೆದ ತಿಂಗಳು ಬಾಂಬೆ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಎಂಎಸ್‌ಸಿಬಿ ಹಗರಣ ಪ್ರಕರಣದಲ್ಲಿ ಅಜಿತ್ ಪವಾರ್ ಮತ್ತು ಇತರ ಕಾರ್ಯಕರ್ತರ ವಿರುದ್ಧ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ (ಎಂಎಸ್‌ಸಿಬಿ) ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ 2007ರಿಂದ 2011ರವೆರೆಗೆ ಬ್ಯಾಂಕ್‌ಗೆ ಉಂಟಾದ 1000 ಕೋಟಿ ರೂ. ನಷ್ಟಕ್ಕೆ ಕಾರಣವಾದ ಆರೋಪ ಇವರ ಮೇಲೆ ಕೇಳಿಬಂದಿತ್ತು.
.