ಭುವನೇಶ್ವರ್: ಪ್ಲಾಸ್ಟಿಕ್ ಪೆನ್ ನ ಬದಲಾಗಿ ಇಕೊ ಫ್ರೆಂಡ್ಲಿ ಪೆನ್ ಅನ್ನು ಭುವನೇಶ್ವರ್ ನ ಪ್ರೇಮ್ ಪಾಂಡೆ ಹಾಗೂ ಎಂ.ಡಿ. ಅಹಮದ್ ರಾಜಾ ತಯಾರಿಸಿದ್ದಾರೆ.
ಪ್ಲಾಸ್ಟಿಕ್ ಬಳಕೆಯಿಂದ ಹೆಚ್ಚುತ್ತಿರುವ ಆತಂಕಗಳು ಮತ್ತು ಪರಿಸರದ ಮೇಲೆ ಅದರ ಹಾನಿಕಾರಕ ಪರಿಣಾಮ ತಡೆಯುವ ನಿಟ್ಟಿನಲ್ಲಿ ಇವರು ದಿನಪತ್ರಿಕೆ, ಹಣ್ಣು, ತರಕಾರಿ, ಬೀಜಗಳಿಂದ ಪೆನ್ ತಯಾರಿಸಿದ್ದಾರೆ. ಪ್ರೇಮ್ ಮತ್ತು ಅಹಮದ್ ಲಿಕ್ನ ಎಂಬ ಸಂಸ್ಥೆಯನ್ನು ಆರಂಭಿಸಿ ಅಲ್ಲೇ ಪೆನ್ ತಯಾರಿಸುತ್ತಿದ್ದಾರೆ.
ಈ ಪೆನ್ಗಳು ಎರಡು ರೂಪದಲ್ಲಿ ಲಭ್ಯವಿದೆ. ಒಂದು, ತರಕಾರಿ, ಹಣ್ಣು ಮತ್ತು ಹೂವಿನ ಬೀಜಗಳನ್ನು ಒಳಗೊಂಡಿರುತ್ತದೆ, ಅದು ಎಸೆದ ನಂತರ ಸಸ್ಯಗಳಾಗಿ ಪುನರುತ್ಪಾದಿಸಬಹುದು, ಇನ್ನೊಂದು ಬೀಜಗಳಿಲ್ಲದೇ ತಯಾರಿಸಲಾಗುತ್ತದೆ. ಪೆನ್ ಕೇವಲ 5 ಮತ್ತು 7 ರೂ.ಗಳಲ್ಲಿ ದೊರೆಯುತ್ತಿದ್ದು, ಬಳಸಿ ಎಸೆಯಬಹುದಾದ ಪೆನ್ ಆಗಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಪ್ರೇಮ್ ಪಾಂಡೆ, ನಮ್ಮದು ಪರಿಸರ ಸಂರಕ್ಷಣೆ ದೃಷ್ಟಿಯಿಂದ ಅತೀ ಕಡಿಮೆ ಪ್ಲಾಸ್ಟಿಕ್ ಬಳಸಿಕೊಂಡು ಉತ್ಪಾದನೆ ಆಗುವ ಪೆನ್ ಆಗಿದೆ. ಮುಂಬರುವ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಬಳಸುತ್ತಿರುವ ಪ್ಲಾಸ್ಟಿಕ್ ಅನ್ನು ಸಹ ಸಂಪೂರ್ಣವಾಗಿ ಕಡಿಮೆ ಮಾಡುತ್ತೇವೆ ಅಂತಾರೆ ಈ ಯುವಕರು.
ಇತರ ಎಲ್ಲ ಪೆನ್ಗಳಲ್ಲಿ ಶೇ 100ರಷ್ಟು ಪ್ಲಾಸ್ಟಿಕ್ ಇರುತ್ತದೆ ಆದರೆ, ನಾವು ತಯಾರಿಸುವ ಪೆನ್ನಿನಲ್ಲಿ ಕೇವಲ ಶೇ10 ರಷ್ಟು ಮಾತ್ರ ಪ್ಲಾಸ್ಟಿಕ್ ಬಳಕೆ ಮಾಡಿದ್ದು ಉಳಿದೆಲ್ಲ ಪರಿಸರದಲ್ಲಿ ಲೀನವಾಗುವ ವಸ್ತುವಾಗಿದೆ ಎನ್ನುವುದು ಇವರ ಹೇಳಿಕೆಯಾಗಿದೆ.
ಇನ್ನು ಅಹಮದ್ ಮಾತನಾಡಿ, ಈ ಪೆನ್ಗಳು ಸುಲಭವಾಗಿ ಮಣ್ಣಿನಲ್ಲಿ ತ್ಯಜಿಸಿ ಸಸ್ಯವಾಗಿ ಮೊಳಕೆಯೊಡೆಯುತ್ತದೆ. ಭಾರತದಲ್ಲಿ ಮಾತ್ರವಲ್ಲದೇ ಜರ್ಮನಿ ಮತ್ತು ಆಸ್ಟ್ರೇಲಿಯಾದಿಂದಲೂ ಈ ಪ್ರಯತ್ನಕ್ಕೆ ಉತ್ತಮ ಮಾತುಗಳು ಕೇಳಿ ಬಂದಿವೆ. ಸದ್ಯ ಎಲ್ಲ ಮಾರುಕಟ್ಟೆಗಳಲ್ಲಿ ಈ ಪೆನ್ನುಗಳು ಲಭ್ಯವಿದೆ ಎಂದು ಆ ಯುವಕರು ಮಾಹಿತಿ ನೀಡಿದ್ದಾರೆ.