ನವದೆಹಲಿ: ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರು ಕಾಂಗ್ರೆಸ್ ಘೋಷಿಸಿರುವ ಕನಿಷ್ಠ ಆದಾಯ ಭದ್ರತೆ ಯೋಜನೆಯನ್ನು ಟೀಕಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ರಾಜೀವ್ ಕುಮಾರ್ ನೀತಿ ಸಂಹಿತೆ ಉಲ್ಲಂಘಿಸಿರುವುದು ದೃಢಪಟ್ಟಿದೆ. ಮುಂದೆ ತಮ್ಮ ಹೇಳಿಕೆಗಳ ಮೇಲೆ ಹಿಡಿತವಿಟ್ಟುಕೊಳ್ಳುವಂತೆ ಆಯೋಗ ಎಚ್ಚರಿಕೆ ನೀಡಿದೆ. ಜೊತೆಗೆ ನೀತಿ ಆಯೋಗದ ಉಪಾಧ್ಯಕ್ಷರ ಹೇಳಿಕೆಗೆ ಇಸಿ ಅಸಮಾಧಾನ ವ್ಯಕ್ತಪಡಿಸಿದೆ.
ಮಾರ್ಚ್ 27 ರಂದು ರಾಜೀವ್ ಕುಮಾರ್ ಎನ್ವೈಎವೈ ಯೋಜನೆಯನ್ನು ಟೀಕಿಸಿದ್ದರು. ಇದರಿಂದ ಇವರ ಮೇಲೆ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಕೇಳಿಬಂದಿತ್ತು. ಆ ಬಳಿಕ ಚುನಾವಣಾ ಆಯೋಗ ಇವರಿಗೆ ನೋಟಿಸ್ ಜಾರಿ ಮಾಡಿ, ಉತ್ತರಿಸುವಂತೆ ಸೂಚಿಸಿತ್ತು.
ಕಡುಬಡವರಿಗೆ ಕನಿಷ್ಠ ಆದಾಯ ಭದ್ರತೆ ನೀಡುವುದಾಗಿ ರಾಹುಲ್ ಗಾಂಧಿ ಮಾ.25 ರಂದು ಘೋಷಿಸಿದ್ದರು. ಈ ಯೋಜನೆ ಆರ್ಥಿಕ ಪರೀಕ್ಷೆಯಲ್ಲಿ ಸೋತಿದೆ. ಇದರಿಂದ ಆರ್ಥಿಕ ಅಸ್ಥಿರತೆ ಉಂಟಾಗಲಿದೆ. ಕಾಯಕ ತತ್ತ್ವಕ್ಕೆ ಇದು ತದ್ವಿರುದ್ಧವಾಗಿದ್ದು, ಎಂದಿಗೂ ಅನುಷ್ಠಾನಗೊಳ್ಳದು ಎಂದು ರಾಜೀವ್ ಕುಮಾರ್ ಕುಟುಕಿ ವಿವಾದಕ್ಕೆ ಗುರಿಯಾಗಿದ್ದರು.