ನವದೆಹಲಿ : ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ)ಯ ಸುವರ್ಣ ಮಹೋತ್ಸವ ಆಚರಣೆಯ ಅಧಿಕೃತ ಲೋಗೋವನ್ನು ಕಾರ್ಯದರ್ಶಿ ಪ್ರೊ.ಅಶುತೋಷ್ ಶರ್ಮಾ ಬಿಡುಗಡೆ ಮಾಡಿದರು.
ಒಂದು ವರ್ಷ 15 ರಿಂದ 20 ವೆಬಿನಾರ್ ಉಪನ್ಯಾಸ, ಕಿರು ಚಿತ್ರಗಳ ಬಿಡುಗಡೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ತನ್ನ ಸ್ವಾಯತ್ತ ಸಂಸ್ಥೆಗಳ ಮೂಲಕ ಡಿಎಸ್‌ಟಿ ಸುವರ್ಣ ಮಹೋತ್ಸವ ಆಚರಿಸಲಿದೆ.
ಸುವರ್ಣ ಮಹೋತ್ಸವ ಆಚರಣೆಯ ಭಾಗವಾಗಿ ಡಿಎಸ್ಟಿಯ ಎಲ್ಲಾ ಅಧೀನ ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಹೊಸದಾಗಿ ಬಿಡುಗಡೆ ಮಾಡಿರುವ ಲೋಗೋವನ್ನು ಡಿಎಸ್ಟಿಯ ಸಾಮಾಜಿಕ, ಡಿಜಿಟಲ್ ಮತ್ತು ಮುದ್ರಣ ದಾಖಲೆಗಳ ಮೇಲೆ ಮುದ್ರಿಸಲಾಗುವುದು. ಅಧೀನ ಸಂಸ್ಥೆಗಳು ಕೂಡ ಎಲ್ಲಾ ಬ್ಯಾನರ್ಗಳಲ್ಲಿ ಲೋಗೋ ಪ್ರದರ್ಶಿಸುವಂತೆ ಪ್ರೊಫೆಸರ್ ಶರ್ಮಾ ಸೂಚಿಸಿದ್ದಾರೆ.
ಡಿಎಸ್‌ಟಿ 3 ಕಾಫಿ ಟೇಬಲ್ ಪುಸ್ತಕಗಳನ್ನು ಪ್ರಿಂಟ್ ಮತ್ತು ಡಿಜಿಟಲ್ ರೂಪದಲ್ಲಿ ಹೊರತರಲು ಯೋಚಿಸುತ್ತಿದೆ. ಅವುಗಳಲ್ಲಿ ಒಂದು ಕಳೆದ 50 ವರ್ಷಗಳಲ್ಲಿ ಡಿಎಸ್‌ಟಿ ಸಾಗಿ ಬಂದ ಹಾದಿಯ ಬಗ್ಗೆ ತಿಳಿಸಲಿದೆ. ಇನ್ನೊಂದು ಮುಂದಿನ 50 ವರ್ಷ ಡಿಎಸ್‌ಟಿ ಸಾಗಬೇಕಾದ ಹಾದಿಯ ಬಗ್ಗೆ ತಿಳಿಸಲಿದೆ ಎಂದು ಶರ್ಮಾ ಹೇಳಿದ್ದಾರೆ.