ಕಡಪ (ಆಂಧ್ರ ಪ್ರದೇಶ): ಜಿಲ್ಲೆಯ ಸಿಕೆ ದಿನ್ನೆ ಮಂಡಲದ ಮೂಲಲಂಕಾ ಗ್ರಾಮದ ಬಳಿ ಜುಲೈ 13ರ ಸೋಮವಾರ 100 ಅಡಿ ಆಳದ ಶಿಥಿಲಗೊಂಡ ಬಾವಿಯಲ್ಲಿ ಬಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಹಗ್ಗದ ಸಹಾಯದಿಂದ ಬಾವಿಗೆ ಬಿದ್ದ ವ್ಯಕ್ತಿಯನ್ನು ಮೇಲೆತ್ತಿ ಆ್ಯಂಬುಲೆನ್ಸ್ ಮೂಲಕ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾವಿಗೆ ಬಿದ್ದ ವ್ಯಕ್ತಿಯ ಕೈ ಮುರಿದಿದ್ದು, ತಲೆಗೆ ಸ್ವಲ್ಪ ಗಾಯವಾಗಿದೆ ಎಂದು ಕಡಪ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎಂ.ಭೂಪಾಲ್ ರೆಡ್ಡಿ ತಿಳಿಸಿದ್ದಾರೆ.
ಭೂಕ್ಯ ಕಿಶೋರ್ ನಾಯಕ್ (26) ಕುಡಿದ ಮತ್ತಿನಲ್ಲಿ ಮೂಲಲಂಕಾ ಗ್ರಾಮದ ಬಳಿಯ ಶಿಥಿಲಾವಸ್ಥೆಯಲ್ಲಿರುವ ಬಾವಿಗೆ ಬಿದ್ದಿದ್ದ. ಸಿ.ಕೆ. ದಿನ್ನೆ ಸಬ್ ಇನ್ಸ್‌ಪೆಕ್ಟರ್ ರಾಜೇಶ್ವರ ರೆಡ್ಡಿ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಮಗೆ ಈ ಬಗ್ಗೆ ಮಾಹಿತಿ ನೀಡಿದರು. ಬಳಿಕ ನಮ್ಮ ತಂಡ ಸ್ಥಳಕ್ಕೆ ತೆರಳಿ ಆತನನ್ನು ರಕ್ಷಿಸಿದೆ ಎಂದು ಅಗ್ನಿಶಾಮಕ ಅಧಿಕಾರಿ ಪಿ.ಬಸಿ ರೆಡ್ಡಿ ಮಾಹಿತಿ ನೀಡಿದ್ದಾರೆ.