ಮಹಾರಾಜ್ಗಂಜ್ (ಉತ್ತರಪ್ರದೇಶ): ನಿಷೇಧಿತ ಡ್ರಗ್ಸ್ ಕೊಂಡೊಯ್ಯುತ್ತಿದ್ದ ಆರೋಪಿಯನ್ನು ಭಾರತ-ನೇಪಾಳ ಗಡಿಯಲ್ಲಿ ಸಶಸ್ತ್ರ ಸೀಮಾ ಬಲ ಹಾಗೂ ಉತ್ತರಪ್ರದೇಶ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ಉತ್ತರಪ್ರದೇಶದ ಮಹಾರಾಜಗಂಗ್ ಜಿಲ್ಲೆಯ ಸೋನೌಲಿಯಲ್ಲಿ ಮೊಹಮ್ಮದ್ ಇಂಟಕಮ್ ಎಂಬ ವ್ಯಕ್ತಿ ಅನುಮಾನಾಸ್ಪದ ರೀತಿ ತಿರುಗಾಡುತ್ತಿದ್ದ. ಈ ವೇಳೆ ಆತನನ್ನು ತಡೆದು ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ ಅವನ ಬಳಿ ಇದ್ದದ್ದು ಸುಮಾರು ₹1 ಕೋಟಿ ಮೌಲ್ಯದ ಡ್ರಗ್ಸ್ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ನಿವೇಶ್ ಕಟಿಯಾರ್,ಎಸ್‌ಎಸ್‌ಬಿ ಮತ್ತು ಪೊಲೀಸರು ಭಾರತ-ನೇಪಾಳ ಗಡಿಯಲ್ಲಿ ಗಸ್ತು ತಿರುಗುತ್ತಿದ್ದಾಗ ಶ್ಯಾಮ್‌ಕತ್ ಉದ್ಯಾನದ ಬಳಿ ಅನುಮಾನಾಸ್ಪದ ವ್ಯಕ್ತಿಯೊಬ್ಬ ಭಾರತದಿಂದ ನೇಪಾಳಕ್ಕೆ ತೆರಳುತ್ತಿದ್ದ. ಹಿಡಿಯಲು ಯತ್ನಿಸಿದಾಗ ಆತ ಪರಾರಿಯಾಗಲು ಯತ್ನಿಸಿದ. ಆಗ ಪೊಲೀಸರು ಆತನನ್ನು ಹಿಡಿದು 107 ಗ್ರಾಂ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಬಂಧಿತನ ವಿರುದ್ಧ NDPS(Narcotic Drugs and Psychotropic Substances)ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆತನನ್ನು ಜೈಲಿಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ.