ಒಡಿಶಾ: ಬುಡಕಟ್ಟು ಪ್ರಾಬಲ್ಯ ಇರುವ ಮಯೂರ್ಭಂಜ್ ಜಿಲ್ಲೆಯ ಡಾ. ದಮಯಂತಿ ಬೆಶ್ರಾ ಅವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಧಕಿ. ಸಂಶೋಧನಾ ಲೇಖಕಿ ಮತ್ತು ಕವಯಿತ್ರಿ, ಬರಹಗಾರ್ತಿ, ವಿದ್ವಾಂಸರಾಗಿ ಗುರುತಿಸಿಕೊಂಡಿದ್ದಾರೆ.
ಸಂತಾಲಿ ಭಾಷೆಯಲ್ಲಿ ಅವರು ಸಂಶೋಧನಾ ಲೇಖನ ಬರೆದು ಸಾಕಷ್ಟು ಹೆಸರನ್ನು ಗಳಿಸಿ, ಒಡಿಯಾ ಭಾಷೆಯಲ್ಲೂ ಪರಿಣತಿಯನ್ನು ಹೊಂದಿದ್ದಕ್ಕಾಗಿ ಪದ್ಮಶ್ರೀ ಪ್ರಶಸ್ತಿ ಇವರಿಗೆ ಸಂದಿದೆ. ಇವರು ಬಾಲ್ಯದಿಂದಲೇ ಸಂತಾಲಿ ಮತ್ತು ಒಡಿಯಾ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದ್ದರು. ಆದ್ರೆ ತನ್ನ ಬರವಣಿಗೆಗಳು ಮದುವೆ ನಂತರವೇ ಪುಸ್ತಕದ ರೂಪದಲ್ಲಿ ಹೊರಬಂದಿವೆ ಎನ್ನುತ್ತಾರೆ ಡಾ. ಬೆಶ್ರಾ.
ದಮಯಂತಿ ಅವರು ಬುಡಕಟ್ಟು ಕುಟುಂಬದಲ್ಲಿ ಜನಿಸಿದ ಮಹಿಳೆ. ತಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಒಬ್ಬರೇ ಎದುರಿಸಿದ್ದಾರೆ. ಓರ್ವ ಮಹಿಳೆ ತನಗೆ ಸಮಸ್ಯೆಗಳು ಎದುರಾದಾಗ ಅವುಗಳ ವಿರುದ್ಧ ಹೋರಾಡಬೇಕೇ ಹೊರತು, ಆಕೆ ತನ್ನನ್ನು ದುರ್ಬಲ ಎಂದು ಭಾವಿಸಬಾರದು. ಎಲ್ಲವನ್ನು ಹಿಮ್ಮೆಟ್ಟಿ ಮುಂದೆ ಸಾಗಬೇಕೆನ್ನುತ್ತಾರೆ. ಆದರೆ ಈಗಲೂ ಬುಡಕಟ್ಟು ಸಮುದಾಯದ ಮಹಿಳೆಯರು ಶಿಕ್ಷಣದಿಂದ ದೂರ ಉಳಿದಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಅವರನ್ನು ಮುಂದೆ ಕೊಂಡೊಯ್ಯುವ ತುರ್ತು ಅವಶ್ಯಕತೆಯಿದೆ ಎನ್ನುವುದು ದಮಯಂತಿ ಅವರ ಆಶಯ.
ಡಾ. ದಮಯಂತಿ ಬೆಷಾ ಅವರು ಸಂತಾಲಿ ಭಾಷೆಯಲ್ಲಿ ಭಾಷಾಂತರ ಮಾಡಿದ್ದಕ್ಕಾಗಿ ಮತ್ತು ಈ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವುದಕ್ಕೆ 2010 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ.
ಪಂಡಿತ್ ರಘುನಾಥ್ ಮರ್ಮು ಮತ್ತು ಚೈಚಂಪಿರು ಇಂಜಿ ದಿಶನ್ ಈ ಎರಡು ಸಂಶೋಧನಾ ಲೇಖನಗಳಿಗೂ ಕೂಡ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಸಂತಾಲಿ ಭಾಷೆಯಲ್ಲಿ ಕವನ ಸಂಕಲನ, ಪ್ರಬಂಧ, ವಿಮರ್ಶೆ ಆಧಾರಿತ ಪುಸ್ತಕಗಳು, ವ್ಯಾಕರಣ ಮತ್ತು ಸಂತಾಲಿ ಭಾಷೆಯ ಸಂಕ್ಷಿಪ್ತ ಇತಿಹಾಸ ಮುಂತಾದ ಹಲವಾರು ವಿಷಯ ಕುರಿತು ಪುಸ್ತಕಗಳನ್ನು ಇವರು ಪ್ರಕಟಿಸಿದ್ದಾರೆ.
ಇದೀಗ ಡಾ. ದಮಯಂತಿ ಬೇಶ್ರಾ ಅವರು ಮಹಾರಾಜ ಪೂರ್ಣಚಂದ್ರ ಅಟೋನಮಸ್ ಕಾಲೇಜಿನಲ್ಲಿ ಒಡಿಯಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫೆಬ್ರವರಿ 18, 1962 ರಂದು ಬುಡಕಟ್ಟು ಪ್ರಾಬಲ್ಯದ ಮಯೂರ್ಭಂಜ್ ಜಿಲ್ಲೆಯ ರಾಯರಂಗಪುರ ಉಪವಿಭಾಗದ ಚೋಬೈಜೋಡ ಗ್ರಾಮದಲ್ಲಿ ಜನಿಸಿದರು. ಬುಡಕಟ್ಟು ಪ್ರಾಬಲ್ಯದ ಮಯೂರ್ಭಂಜ್ ಜಿಲ್ಲೆಯ ಮೊದಲ ಬುಡಕಟ್ಟು ಲೇಖಕಿ ಎಂದು ಡಾ. ದಮಯಂತಿ ಬೆಶ್ರಾ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.