ನವದೆಹಲಿ: ಕಳೆದ ಕೆಲ ದಿನಗಳಿಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರ ರೂಪ ಪಡೆದುಕೊಂಡಿದ್ದು, ಸಾವಿನ ಸಂಖ್ಯೆ 24ರ ಗಡಿ ದಾಟಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸ್ಥಳೀಯ ಪೊಲೀಸ್ ಹಾಗೂ ಪ್ಯಾರಾ ಮಿಲಿಟರಿ ಪಡೆ ಹರಸಾಹಸ ಪಡುತ್ತಿದೆ.
ಇದರ ಮಧ್ಯೆ ಹಿಂಸಾಚಾರ ಹಾಗೂ ಪ್ರತಿಭಟನಾ ಸ್ಥಳಗಳಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿದರು. ಈ ವೇಳೆ, ಮಾತನಾಡಿದ ಅವರು ಎಲ್ಲ ಸ್ಥಳಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.
ಘಟನಾ ಸ್ಥಳಗಳಿಗೆ ಭೇಟಿ ನೀಡುವುದಕ್ಕೂ ಮುಂಚಿತವಾಗಿ ಡಿಸಿಪಿ ಈಶಾನ್ಯ ಕಚೇರಿಗೆ ಭೇಟಿ ನೀಡಿದ ಅವರು ಮಾಹಿತಿ ಪಡೆದುಕೊಂಡರು. ಕಳೆದ ನಾಲ್ಕು ದಿನಗಳಿಂದ ಹಿಂಸಾಚಾರದಿಂದಾಗಿ ದೆಹಲಿ ಹೊತ್ತಿ ಉರಿಯುತ್ತಿದ್ದು, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಪೊಲೀಸ್ ಪೇದೆ ಸೇರಿ 24 ಮಂದಿ ಸಾವನ್ನಪ್ಪಿದ್ದಾರೆ.