ಹೈದರಾಬಾದ್: ತನ್ನ ಕುಟುಂಬದ ನಾಲ್ವರ ಮೇಲೆ ಹಲ್ಲೆ ನಡೆಸಿ, ತನ್ನ ಇಬ್ಬರು ಸಹೋದರಿಯರನ್ನು ಕೊಂದಿದ್ದ ಆರೋಪಿ ತನ್ನ ಮನೆಯಲ್ಲಿ ನೇಣುಬಿಗಿದುಕೊಂಡು ಮೃತಪಟ್ಟಿದ್ದಾನೆ.
ತನ್ನ ಇಬ್ಬರು ಸಹೋದರಿಯರನ್ನು ಕೊಂದ ಎರಡು ದಿನಗಳ ಬಳಿಕ ಈ ಕೃತ್ಯ ಮಾಡಿಕೊಂಡಿದ್ದಾನೆ. ಅಂದ ಹಾಗೆ ಈ ಘಟನೆ ನಡೆದಿದ್ದು, ಹೈದರಾಬಾದ್ನ ಚಂದ್ರಾಯನಗುಟ್ಟದಲ್ಲಿ. ಅಹ್ಮದ್ ಬಿನ್ ಸಲಾಮ್ ಬಾ ಇಸ್ಮಾಯಿಲ್ ನೇಣಿಗೆ ಶರಣಾಗಿರುವ ವ್ಯಕ್ತಿ.
ಈತ ಕಳೆದೆರೆಡು ದಿನಗಳ ಹಿಂದೆ ತನ್ನ ಇಬ್ಬರು ಸಹೋದರಿಯರಾದ ರಝೀಯಾ ಬೇಗಂ (25) ಮತ್ತು ಝಾಕಿರಾ ಬೇಗಂ (45) ಮೇಲೆ ಡ್ರ್ಯಾಗರ್ನಿಂದ ಹಲ್ಲೆ ಮಾಡಿದ್ದ. ಈ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಒಬ್ಬ ಸಹೋದರಿ ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬಳನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದ್ದರು. ಇಷ್ಟಕ್ಕೆ ಸುಮ್ಮನಾಗದ ಈತ ಬಾಲಾಪುರ ಪ್ರದೇಶದ ಇನ್ನೊಬ್ಬ ಸಹೋದರಿಯ ಮನೆಗೆ ಹೋಗಿದ್ದು, ಆಕೆಯ ಮೇಲೆಯೂ ಇದೇ ರೀತಿ ದಾಳಿ ನಡೆಸಿದ್ದ.
ಆರೋಪಿ ಅಹ್ಮದ್ 2019 ರಲ್ಲಿ ತನ್ನ ಹೆಂಡತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲ್ಪಟ್ಟು ಜಾಮೀನಿನ ಮೇಲೆ ಬಿಡುಗೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.