ಜೋದ್ಪುರ(ರಾಜಸ್ಥಾನ): ಜೋದ್ಪುರದ ಏಮ್ಸ್ ಆಸ್ಪತ್ರೆಯ ವೈದ್ಯರು ಸತತ ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಸಯಾಮಿ ಅವಳಿಗಳನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅವಳಿಗಳ ಎದೆ ಹಾಗೂ ಹೊಟ್ಟೆಯ ಭಾಗ ಒಟ್ಟಿಗೆ ಸೇರಿಕೊಂಡಿತ್ತು. ಅವಳಿಗಳು ಹುಟ್ಟಿದಾಗ ಒಟ್ಟು ಮೂರು ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿದ್ದರು. ಪ್ರತಿಯೊಬ್ಬರ ತೂಕವು ಅಂದಾಜು ಒಂದೂವರೆ ಕಿಲೋಗ್ರಾಂಗಳಷ್ಟಿತ್ತು. ಇಂತಹ ಶಸ್ತ್ರಚಿಕಿತ್ಸೆ ನಡೆಸಲು ಮೂರರಿಂದ ಆರು ತಿಂಗಳುಗಳು ಬೇಕಾಗಿರುತ್ತದೆ ಎಂದು ಏಮ್ಸ್ ನ ಎಚ್ಒಡಿ, ಡಾ. ಅರವಿಂದ ಸಿನ್ಹಾ ಸುದ್ದಿಗಾರರಿಗೆ ತಿಳಿಸಿದರು.
ಅಲ್ಲದೇ ಈ ಮಕ್ಕಳಲ್ಲಿ ಒಂದು ಮಗು ಹೃದಯ, ಶ್ವಾಸಕೋಶ ಮತ್ತು ಮೂತ್ರಪಿಂಡದ ತೊಂದರೆಗಳಿಂದ ಬಳಲುತ್ತಿತ್ತು. ಆ ಮಗು ಬದುಕುಳಿಯುವ ಸಾಧ್ಯತೆ ಕೂಡ ತುಂಬಾ ಕಡಿಮೆಯಿತ್ತು. ಇಂತಹ ಪರಿಸ್ಥಿತಿ ಉಂಟಾದಾಗ ಸಾಮಾನ್ಯವಾಗಿ ಮತ್ತೊಂದು ಮಗುವಿನ ಜೀವಕ್ಕೂ ಅಪಾಯ ಸಂಭವಿಸುವ ಸಾಧ್ಯತೆಯಿರುತ್ತದೆ. ಹಾಗಾಗಿ ನಾವು ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳಬೇಕಾಯಿತು. ನಾಲ್ಕು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಇಬ್ಬರನ್ನು ಯಶಸ್ವಿಯಾಗಿ ಬೇರ್ಪಡಿಸಿದ್ದೇವೆ ಎಂದು ಸಿನ್ಹಾ ವಿವರಿಸಿದ್ದಾರೆ.
ಸದ್ಯ ಅವಳಿ ಮಕ್ಕಳು ವೆಂಟಿಲೇಟರ್‌ನಲ್ಲಿದ್ದು ವೈದ್ಯಕೀಯ ವೀಕ್ಷಣೆಯಲ್ಲಿರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೇ ಸಮಾಜದ ಕೆಳ ಸ್ತರದಿಂದ ಬಂದಿರುವ ಕುಟುಂಬವಾದ್ದರಿಂದ ಶಸ್ತ್ರಚಿಕಿತ್ಸೆಯನ್ನು ಆಸ್ಪತ್ರೆಯೇ ಭರಿಸಿದೆ ಎಂದು ತಿಳಿಸಿದ್ದಾರೆ.