ಹೈದರಾಬಾದ್: ಕರ್ತವ್ಯದಲ್ಲಿದ್ದ ವೈದ್ಯರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯೊಬ್ಬ ಕೊರೊನಾ ಶಂಕಿತನನ್ನು ಆಸ್ಪತ್ರೆಯಿಂದ ಕರೆದುಕೊಂಡು ಪರಾರಿಯಾಗಿರುವ ಘಟನೆ ಹೈದರಾಬಾದ್ನ ಉಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.
ಅವರಿಬ್ಬರು ಪರಾರಿಯಾದ ಬಳಿಕ ರೋಗಿಯ ವರದಿ ಬಂದಿದ್ದು, ಕೋವಿಡ್-19 ದೃಢಪಟ್ಟಿದೆ. ಬಳಿಕ ಪೊಲೀಸರು ಇಬ್ಬರನ್ನೂ ಹುಡುಕಿ ಬೇರೊಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ರೋಗಿಯನ್ನು ಪರಾರಿ ಮಾಡಿದ ವ್ಯಕ್ತಿಯಿಂದ ವೈದ್ಯರಿಗೆ ಜೀವ ಬೆದರಿಕೆ ಇದ್ದು, ವ್ಯಕ್ತಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ರೋಗಿಯ ಸಂಬಂಧಿಕರು ಆಸ್ಪತ್ರೆಗೆ ಆಗಮಿಸಿ, ರೋಗಿಯನ್ನು ಮನೆಗೆ ಕಳುಹಿಸಿಕೊಡುವಂತೆ ಗಲಾಟೆ ಮಾಡಿದ್ದರು. ಅವರು ಒಪ್ಪದಿದ್ದಾಗ, ವ್ಯಕ್ತಿಯೊಬ್ಬ ವೈದ್ಯರ ಮೇಲೆಯೇ ಹಲ್ಲೆ ಮಾಡಿ ರೋಗಿಯನ್ನು ಕರೆದುಕೊಂಡು ಹೋಗಿದ್ದ ಎಂದು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಹೇಳಿದ್ದಾರೆ.
ರೋಗಿಯನ್ನು ಬಿಡುಗಡೆ ಮಾಡುವುದು ಸಾಧ್ಯವಿಲ್ಲ ಎಂದು ಹೇಳಿದಾಗ, ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಆಸ್ಪತ್ರೆಗೆ ಇದೀಗ ಹೆಚ್ಚಿನ ಪೊಲೀಸ್ ರಕ್ಷಣೆ ಒದಗಿಸಲಾಗಿದೆ.