ಆಡಳಿತ ಪಕ್ಷ, ರಾಜಕೀಯ ನಾಯಕರು ಸೇರಿದಂತೆ ಸಂಪೂರ್ಣ ಪಾಕಿಸ್ತಾನ ಭಯೋತ್ಪಾದನೆ ವಿಚಾರದಲ್ಲಿ ಪ್ರತಿಬಾರಿ ಭಾರತವನ್ನು ಕೆಣಕುತ್ತಿದೆ. ಭಯೋತ್ಪಾದನೆಯಿಂದ ತಾನೇ ವಿಪರೀತ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಈ ವಿಚಾರದಲ್ಲಿ ಭಾರತವನ್ನು ಮತ್ತೆ ಮತ್ತೆ ಕೆಣಕುವುದು ಪಾಕ್ಗೆ ಜನ್ಮಸಿದ್ಧ ಹಕ್ಕು ಎಂಬಂತಾಗಿದೆ. ಪಾಕ್ ಬಿಟ್ಟ ಬಾಣ ಅದೆಷ್ಟೋ ಬಾರಿ ತನ್ನ ದೇಶಕ್ಕೇ ಮುಳುವಾಗಿದ್ದರೂ, ಈ ಕೆಟ್ಟ ಚಾಳಿಯಿಂದ ಪಾಕ್ ಇನ್ನೂ ಹೊರಬಂದಿಲ್ಲ ಅನ್ನೋದು ವಿಪರ್ಯಾಸ.
'ಗ್ರೇ ಲಿಸ್ಟ್'ನಲ್ಲಿದೆ ಪಾಕ್
ಜಾಗತಿಕ ಭಯೋತ್ಪಾದನಾ ಚಟುವಟಿಕೆ ಮೇಲೆ ನಿಗಾವಹಿಸುವ ಹಣಕಾಸು ಕಾರ್ಯಪಡೆ(ಎಫ್‌ಎಟಿಎಫ್) ಕಳೆದ ವರ್ಷ ಭಯೋತ್ಪಾದನೆ ಹೋಗಲಾಡಿಸಲು 27 ಕಾರ್ಯಸೂಚಿಗಳನ್ನು ನೀಡಿತ್ತು. ಇವೆಲ್ಲವೂ ಪಾಕ್ನ ಭಯೋತ್ಪಾದನಾ ಚಟುವಟಿಕೆ ಬಗ್ಗೆಯೇ ಇತ್ತು. ಆದರೆ ಅಂತಾರಾಷ್ಟ್ರೀಯ ಸಂಸ್ಥೆಯ ಮಾತಿಗೆ ಕಿಂಚಿತ್ತೂ ಗೌರವ ಕೊಡದ ಪಾಕಿಸ್ತಾನವನ್ನು 'ಬ್ಲ್ಯಾಕ್ ಲಿಸ್ಟ್'ಗೆ ಸೇರಿಸುವ ಚಿಂತನೆಯನ್ನು ಎಫ್‌ಎಟಿಎಫ್ ಮಾಡಿತ್ತು. ಪಾಕ್ಗೆ ಮತ್ತೆ ಸೂಚನೆ ನೀಡಿ, ಭಯೋತ್ಪಾನೆ ನಿಗ್ರಹ ಮಾಡುವಂತೆ ಎಚ್ಚರಿಕೆ ನೀಡಿತ್ತು. ಅಲ್ಲದೆ ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡುತ್ತಿರುವುದನ್ನೂ ವಿರೋಧಿಸಿತ್ತು. ಆದರೆ ಪಾಕ್ ಇದಕ್ಕೆಲ್ಲಾ ಬಗ್ಗದ ಕಾರಣ ಪಾಕಿಸ್ತಾನವನ್ನು 'ಗ್ರೇ ಲಿಸ್ಟ್'ಗೆ ಸೇರಿಸಿ, 27ರಲ್ಲಿ ಕನಿಷ್ಟ 22 ಷರತ್ತುಗಳನ್ನು ಈಡೇರಿಸಲು ಸೂಚನೆ ನೀಡಿದೆ.
ವಾಸ್ತವದಲ್ಲಿ ಎಫ್‌ಎಟಿಎಫ್ ಆ ದೇಶವನ್ನು ಇರಾನ್ ಮತ್ತು ಉತ್ತರ ಕೊರಿಯಾ ದೇಶಗಳನ್ನು ಕಪ್ಪು ಪಟ್ಟಿಗೆ ಸೇರಿಸಿದಂತೆ ಸೇರಿಸಬೇಕಿತ್ತು. ಆದರೂ ಪಾಕ್ಗೆ ಇನ್ನೂ ನಾಲ್ಕು ತಿಂಗಳ ಹೆಚ್ಚುವರಿ ಸಮಯಾವಕಾಶವನ್ನು ನೀಡಲಾಗಿದೆ. ಎಫ್‌ಎಟಿಎಫ್ ಅಧ್ಯಕ್ಷ ಜಿಯಾಂಗ್ ಮಿನ್ ಲೀ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದು, ಈ ಷರತ್ತಿಗೆ ಪಾಕಿಸ್ತಾನ ಈಗಲೂ ಪ್ರತಿಕ್ರಿಯೆ ನೀಡದಿದ್ದರೆ, ಮುಂದಿನ ಫೆಬ್ರವರಿಯೊಳಗೆ ಕ್ರಿಯಾ ಯೋಜನೆಗೆ ಸ್ಪಂದಿಸದಿದ್ದರೆ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಪಾಕಿಸ್ತಾನಕ್ಕೆ ಚೀನಾ ಬೆಂಬಲ!
ಚೀನಾ, ಟರ್ಕಿ ಮತ್ತು ಮಲೇಷ್ಯಾ ರಾಷ್ಟ್ರಗಳ ಸಹಾಯದಿಂದ ಪಾಕ್ಗೆ ತಾತ್ಕಾಲಿಕವಾಗಿ ನಿಷೇಧ ಹೇರದಂತೆ ಉಳಿಸಲಾಗಿದೆ. ಈ ದೇಶಗಳು ಸದ್ಯ ಪಾಕಿಸ್ತಾನವನ್ನು ರಕ್ಷಿಸುತ್ತಿದ್ದು, ಮುಂಬರುವ ನಾಲ್ಕು ತಿಂಗಳಲ್ಲಿ ಭಯೋತ್ಪಾದಕ ಚಟುವಟಿಕೆ ನಿಗ್ರಹಿಸುವ ಕ್ರಿಯಾ ಯೋಜನೆಯನ್ನು ಪಾಕ್ ಜಾರಿಗೊಳಿಸಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಾಯಬೇಕಿದೆ.
ಎಫ್‌ಎಟಿಎಫ್ ಹೇಳೋದೇನು!
ಮೂರು ದಶಕಗಳ ಹಿಂದೆ ನಡೆದ ಜಿ -7 ಶೃಂಗಸಭೆಯು ಹಣದ ಅನಧಿಕೃತ ಹರಿವು, ಬ್ಯಾಂಕಿಂಗ್ ವ್ಯವಸ್ಥೆ ಮತ್ತು ದೇಶಗಳ ಆರ್ಥಿಕ ಸ್ಥಿರತೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂಬ ಅಂಶವನ್ನು ಗುರುತಿಸಿತ್ತು. ಹೀಗಾಗಿ ಅಕ್ರಮ ಹಣ ವರ್ಗಾವಣೆಯನ್ನು ನಿರ್ಬಂಧಿಸುವ ಗುರಿಯೊಂದಿಗೆ ಎಫ್‌ಎಟಿಎಫ್ಅನ್ನು ರಚಿಸಿಲಾಗಿತ್ತು. 1989 ರಲ್ಲಿ ಎಫ್‌ಎಟಿಎಫ್ ಸ್ಥಾಪನೆಗೊಂಡಿತು. 2001ರಲ್ಲಿ ಭಯೋತ್ಪಾದಕರಿಗೆ ಹಣಕಾಸಿನ ನೆರವು ಸೇರಿದಂತೆ, ಭಯೋತ್ಪಾದನೆಯನ್ನು ನಿರ್ಮೂಲನೆಗೊಳಿಸಬೇಕೆಂಬ ನೀತಿ ರೂಪಿಸಿ, ಸದಸ್ಯ ರಾಷ್ಟ್ರಗಳು ಅದನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿತು. ಅಕ್ರಮ ಹಣ ವರ್ಗಾವಣೆ, ಭಯೋತ್ಪಾದನೆಗೆ ಹಣ ಪೂರೈಕೆಯ ನಿರ್ಬಂಧದ ಬಗೆಗೆ ವಿಶೇಷವಾಗಿ ರಚಿಸಲಾದ ಒಂಭತ್ತು ಶಿಫಾರಸ್ಸುಗಳನ್ನು ವಿಧಿಸಿ, ಎಲ್ಲಾ ರಾಷ್ಟ್ರಗಳು ಅಂತಾರಾಷ್ಟ್ರೀಯ ಮಾನದಂಡಗಳೊಂದಿಗೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಸೂಚಿಸಿತು.
ಇದರ ಪರಿಣಾಮವೇ, ಯಾವುದೇ ನೀತಿ -ನಿಯಮಗಳಿಗೆ ತಲೆ ಕೆಡಿಸಿಕೊಳ್ಳದ ಪಾಕಿಸ್ಥಾನ 2012-15ರವರೆಗೆ ಗ್ರೇ ಲಿಸ್ಟ್ನಲ್ಲಿ ಅಗ್ರಸ್ಥಾನದಲ್ಲೇ ಇದೆ. ತಾನು ಉಗ್ರ ಚಟುವಟಿಕೆ ನಡೆಸುತ್ತಿಲ್ಲ ಹಾಗೂ ಭಯೋತ್ಪಾದನೆಗೆ ಯಾವುದೇ ನೆರವು ನೀಡುತ್ತಿಲ್ಲ ಎಂದು ಪಾಕ್ ಆಗಾಗ ನಾಟಕೀಯವಾಗಿ ವರ್ತಿಸುತ್ತಿದ್ದರೂ ಇದನ್ನು ಅಂತಾರಾಷ್ಟ್ರೀಯ ಸಂಸ್ಥೆ ನಂಬುತ್ತಿಲ್ಲ.
ಇಮ್ರಾನ್ ಖಾನ್ ವಾದವೇ ಬೇರೆ!
ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಕಳೆದ ಜುಲೈನಲ್ಲಿ ಪಾಕಿಸ್ತಾನ ಭೂಮಿಯಲ್ಲಿ ಉಗ್ರಗಾಮಿ ಗುಂಪುಗಳನ್ನು ನಿಯಂತ್ರಿಸಿ ನಿಶ್ಯಸ್ತ್ರಗೊಳಿಸಿದ ಮೊದಲ ಸರ್ಕಾರ ನಮ್ಮದು ಎಂದು ಘೋಷಿಸಿದ್ದಾರೆ. ಆದರೆ ಇನ್ನೂ ಸುಮಾರು 30 ರಿಂದ 40 ಸಾವಿರ ಭಯೋತ್ಪಾದಕರು ಪಾಕ್ನಲ್ಲಿ ಇದ್ದಾರೆ ಎಂಬುದು ಸತ್ಯ.
ಇತ್ತೀಚೆಗೆ ಎಫ್‌ಎಟಿಎಫ್ ಶೃಂಗಸಭೆಯು ಶ್ರೀಲಂಕಾ, ತುನೀಶಿಯಾ ಮತ್ತು ಇಥಿಯೋಫಿಯಾವನ್ನು ಗ್ರೇ ಲಿಸ್ಟ್ನಿಂದ ತೆಗೆದು ಹಾಕಿತು. ಐಸ್ಲ್ಯಾಂಡ್, ಮಂಗೋಲಿಯಾ ಮತ್ತು ಜಿಂಬಾಬ್ವೆಗಳನ್ನು ಈ ಲಿಸ್ಟ್ಗೆ ಸೇರಿಸಿತು. ಭಾರತವನ್ನು ಆರ್ಥಿಕವಾಗಿ ಸೇರಿದಂತೆ ಎಲ್ಲಾ ರೀತಿಯಲ್ಲೂ ಸೋಲಿಸಲು ಪಾಕಿಸ್ತಾನವು ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಶೀತಲ ಸಮರದಲ್ಲಿ ತೊಡಗಿದೆ. ಅದರ ಪರಿಣಾಮ ಅದೇ ದೇಶ ಈಗ ಭಯೋತ್ಪಾದನೆಯ ಸಂತ್ರಸ್ತ ರಾಷ್ಟ್ರವಾಗಿದೆ.
ಪಾಕ್ನ ಆರ್ಥಿಕ ಕುಸಿತ ಹೇಗಿದೆ ಗೊತ್ತಾ!
ಪಾಕಿಸ್ತಾನವು ಭಯೋತ್ಪಾದನೆಯನ್ನು ವಿದೇಶಾಂಗ ನೀತಿಗೆ ಗೌರವಾರ್ಪಣೆ ಎಂದುಕೊಂಡಂತಿದೆ. ಇದರ ಪರಿಣಾಮವಾಗಿ ಆ ದೇಶದ ಜನಸಂಖ್ಯೆಯ ನಾಲ್ಕನೇ ಒಂದು ಭಾಗ ಇಂದು ಕೂಡಾ ತೀವ್ರ ಬಡತನದಿಂದ ಬಳಲುತ್ತಿದೆ. 40 ಮಿಲಿಯನ್ ರೂ. ಸಾಲ, 3 ಲಕ್ಷ 40 ಸಾವಿರ ಮಿಲಿಯನ್ ರೂಪಾಯಿಗಳ ಆರ್ಥಿಕ ಕೊರತೆ, ಒಂದು ವರ್ಷದಲ್ಲಿ 3300 ಮಿಲಿಯನ್ ಡಾಲರ್ಗಳಿಗೆ ಇಳಿದ ಒಟ್ಟು ಜಿಡಿಪಿ, ಇದರ ಪರಿಣಾಮವಾಗಿ ತಲಾ ಜಿಡಿಪಿಯಲ್ಲಿ 8 % ಕುಸಿತ ಕಂಡುಬಂದಿದೆ. ಬೆಳವಣಿಗೆ ಕಾಣದ ಕೃಷಿ, 13 ರಿಂದ 15 %ದ ನಡುವೆ ಅಂಟಿಕೊಂಡಿರುವ ಹಣದುಬ್ಬರ ದರ, ಇವೆಲ್ಲವೂ ಪಾಕಿಸ್ತಾನದ ಆರ್ಥಿಕತೆಯ ಕುಸಿದ ಸ್ಥಿತಿಯ ನಿಜವಾದ ಅಂಕಿ ಅಂಶಗಳಾಗಿವೆ.
ಪಾಕ್ ಸ್ಥಿತಿ ಅಧೋಗತಿ...
ಈಗ ಮಧ್ಯಂತರ ಪರಿಹಾರವಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನೀಡುವ 600 ಬಿಲಿಯನ್ ಡಾಲರ್ ಸಾಲವು ಪಾಕ್ಗೆ ನಿಜವಾಗಿಯೂ ವರದಾನವೋ ಅಥವಾ ಶಾಪವೋ ಎಂಬ ಗೊಂದಲದ ಸ್ಥಿತಿಯಲ್ಲಿ ಪಾಕಿಸ್ತಾನವಿದೆ. ಅದು ಎಫ್‌ಎಟಿಎಫ್‌ನ ಕಾರ್ಯಸೂಚಿಗಳನ್ನು ಕಾರ್ಯಗತಗೊಳಿಸುವಲ್ಲಿ ವಿಫಲವಾದರೆ, ಪಾಕ್ ಹೆಚ್ಚು ಹೆಚ್ಚು ಸಮಸ್ಯೆಗಳನ್ನು ಎದುರಿಸಲಿದೆ. ಅದನ್ನು ಪದಗಳಲ್ಲಿ ವಿವರಿವುದೂ ಕಷ್ಟಕರ.
ಪಾಕಿಸ್ತಾನವು ನಿಜವಾಗಿಯೂ ಆರ್ಥಿಕ ಕುಸಿತದ ಶೋಚನೀಯ ಸ್ಥಿತಿಯಲ್ಲಿರಲು ಬಯಸದೇ ಇದ್ದರೆ, ಭಯೋತ್ಪಾದಕರಿಗೆ ನೀಡುವ ಧನಸಹಾಯವನ್ನು ತಕ್ಷಣವೇ ನಿಲ್ಲಿಸಬೇಕಿದೆ. ಒಂದು ವೇಳೆ ಮತ್ತೊಮ್ಮೆ ಅದು ಎಂದಿನಂತೆ ಜಗತ್ತನ್ನು ಮೋಸಗೊಳಿಸಲು ಪ್ರಯತ್ನಿಸಿದರೆ, ಭಯೋತ್ಪಾದಕರೂ ನಿರೀಕ್ಷಿಸದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ಆ ದೇಶವನ್ನು ಭಯಾನಕ ಆರ್ಥಿಕ ಕುಸಿತದತ್ತ ಕೊಂಡೊಯ್ಯುವುದರಲ್ಲಿ ಅನುಮಾನವಿಲ್ಲ.