ತಮಿಳುನಾಡು : ದೆಹಲಿ ಗಡಿಯಲ್ಲಿ ರೈತರ ಚಳವಳಿ ಮುಂದುವರಿದಿದೆ. ಈ ಮಧ್ಯೆ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ನಿರ್ಣಯವನ್ನು ತರಲು ವಿಶೇಷ ವಿಧಾನಸಭಾ ಅಧಿವೇಶನ ಕರೆಯುವಂತೆ ಕೋರಿ ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ತಮಿಳುನಾಡು ಸಿಎಂ ಕೆ ಪಳನಿಸ್ವಾಮಿಗೆ ಅವರಿಗೆ ಪತ್ರ ಬರೆದಿದ್ದಾರೆ.
ಈವರೆಗೆ ದೆಹಲಿ, ಕೇರಳ, ರಾಜಸ್ಥಾನ, ಪಂಜಾಬ್, ಚಂಡೀಗಢ ಸೇರಿ 5 ರಾಜ್ಯಗಳು ಕೇಂದ್ರದ ಕೃಷಿ ಮಸೂದೆಗಳ ವಿರುದ್ಧ ನಿರ್ಣಯ ಅಂಗೀಕರಿಸಿವೆ. ಆದರೆ, 2020ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ನೂತನ ಕೃಷಿ ಕಾಯ್ದೆಗಳನ್ನ ಹಿಂಪಡೆಯುವಂತೆ ಈಗಾಗಲೇ ಸಿಂಘು ಗಡಿಯಲ್ಲಿ ಸಾವಿರಾರು ರೈತರು ಪ್ರತಿಭಟಿಸುತ್ತಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಜಾರಿಗೆ ಬಂದ ಈ ಮೂರು ಕೃಷಿ ಕಾನೂನುಗಳನ್ನು ಕೃಷಿ ಕ್ಷೇತ್ರದ ಪ್ರಮುಖ ಸುಧಾರಣೆಗಳೆಂದೇ ಕೇಂದ್ರ ಸರ್ಕಾರ ಬಣ್ಣಿಸಿದೆ. ಈ ಕಾಯ್ದೆಗಳು ಮಧ್ಯವರ್ತಿಗಳ ಕಾಟ ತಪ್ಪಿಸುತ್ತವೆ ಮತ್ತು ರೈತರು ತಮ್ಮ ಉತ್ಪನ್ನಗಳನ್ನು ದೇಶದಲ್ಲಿ ಎಲ್ಲಿಯಾದ್ರೂ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಪ್ರತಿಪಾದಿಸಿದೆ.
ಆದರೆ, ಈ ಕಾಯ್ದೆಗಳು ತಮಗೆ ಮಾರಕ ಎಂದು ಆತಂಕ ವ್ಯಕ್ತಪಡಿಸಿ ದೇಶದ ನಾನಾ ಭಾಗದ ರೈತರು ಬೃಹತ್ 'ರೈತ ಚಲೋ' ಚಳವಳಿ ನಡೆಸುತ್ತಿದ್ದಾರೆ.