ಮುಂಬೈ (ಮಹಾರಾಷ್ಟ್ರ) : ಲಾಕ್ಡೌನ್ ಮಧ್ಯದಲ್ಲೇ ತನ್ನ 14 ವರ್ಷದ ಮಗನನ್ನು ಕರೆತರಲು ವಿಶೇಷ ಚೇತನ ಮಹಿಳೆಯೊಬ್ಬರು ಪುಣೆಯಿಂದ ಅಮರಾವತಿಗೆ ದ್ವಿಚಕ್ರ ವಾಹನದಲ್ಲಿ 1,200 ಕಿ.ಮೀ ಕ್ರಮಿಸಿದ ಅಚ್ಚರಿಯ ನಡೆದಿದೆ.
ಖಾಸಗಿ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿರುವ ಪುಣೆ ಮೂಲದ ಸೋನು ಖಾಂದರೆ ಎಂಬ ವಿಶೇಷ ಚೇತನ ಮಹಿಳೆ, ತನ್ನ 14 ವರ್ಷದ ಮಗನನ್ನು ಕರೆತರಲು ಅಮರಾವತಿಯ ಜಿಲ್ಲೆಯ ಗ್ರಾಮವೊಂದಕ್ಕೆ ಏಪ್ರಿಲ್ 25ರಂದು ತನ್ನ ಸ್ಕೂಟರ್ನಲ್ಲಿ 18 ಗಂಟೆ ಕಾಲ 1200 ಕಿ.ಮೀ ಪ್ರಯಾಣಿಸಿದ್ದಾರೆ. ತನ್ನ ಮಗ ಪ್ರತೀಕ್ ಸಂಬಂಧಿಗಳ ಮನೆಗೆ ಮಾರ್ಚ್ 17ರಂದು ತೆರಳಿದ್ದ. ಮಾರ್ಚ್ 22ರಂದು ಲಾಕ್ಡೌನ್ ಘೋಷಣೆಯಾದ ಮೇಲೆ ಆತ ಅಲ್ಲಿಯೇ ಸಿಕ್ಕಿ ಹಾಕಿಕೊಂಡಿದ್ದ'' ಎಂದು ಖಾಂದರೆ ಸ್ಪಷ್ಟಪಡಿಸಿದ್ದಾರೆ. ಮೊದಲಿಗೆ ಖಾಂದರೆ ಮಗನ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಮೇ 4ರಿಂದ ಮತ್ತೆ ಲಾಕ್ಡೌನ್ ವಿಸ್ತರಣೆಯಾದಾಗ ಆತಂಕಕ್ಕೊಳಗಾಗಿದ್ದ ಅವರು ಹೇಗಾದರೂ ಮಾಡಿ ಮಗನನ್ನು ವಾಪಸ್ ಕರೆತರಬೇಕೆಂದು ನಿರ್ಧರಿಸಿದ್ದರು.
ಇದಕ್ಕಾಗಿ ಖಾಂದರೆ ಜಿಲ್ಲಾಡಳಿತಕ್ಕೆ ಪಾಸ್ಗಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಕಾರೊಂದನ್ನು ಬಾಡಿಗೆ ಪಡೆಯುವ ಬಗ್ಗೆಯೂ ಚಿಂತಿಸಿದ್ದರು. ಇದಕ್ಕೆ 8 ಸಾವಿರ ರೂ. ಖರ್ಚಾಗುತ್ತದೆ ಎಂದು ಗೊತ್ತಾದಾಗ ಆಕೆಯೇ ವೈಯಕ್ತಿಕವಾಗಿ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ ವಿಶೇಷ ಅನುಮತಿ ಪಡೆದುಕೊಂಡರು ಈ ಗಟ್ಟಿಗಿತ್ತಿ ಮಹಿಳೆ. ''48 ಗಂಟೆಗಳ ವಿಶೇಷ ಪ್ರಯಾಣಕ್ಕೆ ಅನುಮತಿ ದೊರೆತ ನಂತರ ಮನೆಗೆ ಬಂದು ಬೇಕಾದ ಆಹಾರವನ್ನು ಪ್ಯಾಕ್ ಮಾಡಿಕೊಂಡು ಹೊರಟ್ಟಿದ್ದೆ. ಮರಾಠವಾಡ ಹಾಗೂ ವಿದರ್ಭಗಳ ನಡುವೆ ಹವಾಮಾನ ಸರಿಯಿರಲಿಲ್ಲ. ಮಾರ್ಗ ಮಧ್ಯೆ ಖಾಮಗಾಂವ್ನಲ್ಲಿ ಒಂದು ರಾತ್ರಿಯನ್ನ ಕೂಡಾ ಕಳೆಯಬೇಕಾಗಿತ್ತು. ಪ್ರತಿಯೊಂದು ಚೆಕ್ ಪೋಸ್ಟ್ನಲ್ಲಿಯೂ ನನ್ನನ್ನು ಪ್ರಶ್ನೆ ಮಾಡುತ್ತಿದ್ದರು.
ರಾತ್ರಿಯ ವೇಳೆ ಸಿಸಿಟಿವಿಗಳು ಇರುವ ಪೆಟ್ರೋಲ್ ಬಂಕ್ಗಳ ಬಳಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೆ. ಏನಾದರೂ ದುರ್ಘಟನೆ ನಡೆದರೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗುತ್ತೆ ಎಂಬ ಭರವಸೆಯಿತ್ತು."ಮಾರ್ಚ್ 25ರ ಬೆಳಗ್ಗೆ ಮತ್ತೆ ಪ್ರಯಾಣ ಶುರು ಮಾಡಿದ ನಾನು ಮಧ್ಯಾಹ್ನದ ವೇಳೆ ಸಂಬಂಧಿಗಳ ಮನೆ ತಲುಪಿ, ನನ್ನ ಮಗನನ್ನು ಭೇಟಿಯಾಗಿದ್ದೆ. ಜೊತೆಗೆ ಪಾಸ್ ಅವಧಿ ಮುಗಿಯುವ ವೇಳೆಗೆ ಮತ್ತೆ ಮನೆಗೆ ವಾಪಸಾಗಬೇಕೆಂದು ತಿಳಿದು ಆಗಲೇ ಪ್ರಯಾಣ ಶುರು ಮಾಡಿದೆ. ಏಪ್ರಿಲ್ 26ರ ರಾತ್ರಿ 11ಗಂಟೆಗೆ ಅಂದರೆ ಪಾಸ್ನ ಅವಧಿ ಮುಗಿಯಲು ಒಂದು ಗಂಟೆ ಬಾಕಿಯಿರುವ ಮುಂಚೆಯೇ ಮನೆ ಸೇರಿಕೊಂಡಿದ್ದೆ'' ಎಂದು ತನ್ನ ಸಾಹಸ ಗಾಥೆಯನ್ನು ಬಣ್ಣಿಸಿದ್ದಾರೆ.
ಈಗ ಸದ್ಯಕ್ಕೆ ಆಕೆ ಮತ್ತು ಆಕೆಯ ಮಗನನ್ನು ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿ 14 ದಿನಗಳ ಕ್ವಾರಂಟೈನ್ನಲ್ಲಿಡಲಾಗಿದೆ. ಆಕೆ ತನ್ನ ಸ್ನಾತಕೋತ್ತರ ಪದವಿಗಾಗಿಯೂ ತಯಾರಿ ನಡೆಸುತ್ತಿದ್ದಾರೆ.