ನವದೆಹಲಿ: ಮಾರಕ ಕೊರೊನಾ ಸೋಂಕು ಪ್ರಾಣಿಗಳಿಂದ ಮನುಷ್ಯನಿಗೆ ಹರಡಿದೆ ಎಂದು ಹೇಳಲಾಗಿದೆ. ಈಗಾಗಲೇ ಪ್ರಪಂಚದಾದ್ಯಂತ 3 ಸಾವಿರಕ್ಕೂ ಹೆಚ್ಚು ಜನರನ್ನ ಬಲಿ ಪಡೆದಿರುವ ಈ ಸೋಂಕು, ನೋಟುಗಳಿಂದಲೂ ಹರಡುತ್ತದೆ ಎಂಬ ಆಘಾತಕಾರಿ ಅಂಶವನ್ನು ವಿಶ್ವ ಆರೋಗ್ಯ ಸಂಸ್ಥೆ(WHO) ಬಹಿರಂಗ ಪಡಿಸಿದೆ.
ಒಬ್ಬರ ಕೈಯಿಂದ ಒಬ್ಬರಿಗೆ ವರ್ಗಾವಣೆಯಾಗುವ ನೋಟಿನ ಮೇಲೂ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿರುತ್ತವೆ. ಹೀಗಾಗಿ ಹಣವನ್ನು ಮುಟ್ಟಿದ ನಂತರ ಕೈ ತೊಳೆದುಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ.
ಈ ಬಗ್ಗೆ ಪ್ರಮುಖ ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರರು, 'ನೂರಾರು ಜನರಿಂದ ವರ್ಗಾವಣೆಯಾಗುವ ನೋಟುಗಳ ಮೇಲೆ ಧೂಳು ಅಂಟಿರುತ್ತದೆ. ಬ್ಯಾಕ್ಟೀರಿಯಾ ಮತ್ತು ವೈರಾಣುಗಳು ಕೂಡ ಇರುತ್ತವೆ. ಹೀಗಾಗಿ ಹಣವನ್ನು ಮುಟ್ಟಿದ ನಂತರ ಮುಖ ಮುಟ್ಟಿಕೊಳ್ಳದೆ, ಕೈತೊಳೆದುಕೊಳ್ಳಬೇಕು' ಎಂದಿದ್ದಾರೆ.
ಇಂತಾ ಭೀತಿಯಿಂದ ಪಾರಾಗಲು ಜನರು ನಗದು ರಹಿತ ವ್ಯವಹಾರದ ನೆಸಿದರೆ ಉತ್ತಮ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ. ಬ್ಯಾಂಕ್ ಆಫ್ ಇಂಗ್ಲೆಂಡ್ ಸಹ ನೋಟುಗಳು 'ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳನ್ನು ಒಯ್ಯಬಲ್ಲವು' ಎಂದು ಒಪ್ಪಿಕೊಂಡಿದ್ದು, ಜನರು ನಿಯಮಿತವಾಗಿ ಕೈ ತೊಳೆದುಕೊಳ್ಳುವಂತೆ ಒತ್ತಾಯಿಸಿದೆ.
ಇಷ್ಟೇ ಅಲ್ಲದೆ, ವೈರಸ್ ಹರಡುವುದನ್ನು ತಡೆಯಲು ದಿನಕ್ಕೆ ಎರಡು ಬಾರಿ ಆದ್ರೂ ತಮ್ಮ ಸ್ಮಾರ್ಟ್ ಫೋನ್ ಸ್ಕ್ರೀನ್ ಮತ್ತು ಎಟಿಎಂ ಕಾರ್ಡ್ಗಳನ್ನು ಸ್ವಚ್ಛಗೊಳಿಸಬೇಕು ಎಂದು ಸಾರ್ವಜನಿಕರನ್ನು ಕೋರಲಾಗಿದೆ.
ಕಳೆದ ತಿಂಗಳು ಚೀನಾ ಮತ್ತು ಕೊರಿಯಾ ದೇಶಗಳು ರೋಗದ ಹರಡುವಿಕೆಯನ್ನು ತಡೆಯುವ ಪ್ರಯತ್ನಗಳ ಭಾಗವಾಗಿ ಬಳಸಿದ ನೋಟುಗಳನ್ನು ಪ್ರತ್ಯೇಕಿಸಲು ಪ್ರಾರಂಭಿಸಿವೆ.