ಕೋಲ್ಕತ: ಮೂರು ವರ್ಷಕ್ಕೂ ಹಿಂದೆ ನೋಟು ಅಮಾನ್ಯೀಕರಣ ನಡೆದ ಸಮಯದಲ್ಲಿ ಬ್ಯಾಂಕ್ಗಳಿಂದ ಹಣ ಹಿಂತೆಗೆದುಕೊಳ್ಳಲು ಸರದಿಯಲ್ಲಿ ನಿಂತು ನೂರಾರು ಮಂದಿ ಮೃತಪಟ್ಟಿದ್ದರು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಆದರೆ ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ದೆಹಲಿಯ ಶಹೀನ್ ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಯಾರೂ ಸಾಯುತ್ತಿಲ್ಲವಲ್ಲ ಏಕೆ? ಎಂದು ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಮುಖ್ಯಸ್ಥ ದಿಲೀಪ್ ಘೋಷ್ ಪ್ರಶ್ನಿಸಿದ್ದಾರೆ.
ಕೋಲ್ಕತ್ತಾ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು. ನೋಟ್ ಬ್ಯಾನ್ ಆದಾಗ ಹಣ ಪಡೆಯಲು ಸರದಿಯಲ್ಲಿ ನಿಂತು ಹೈರಾಣಾಗಿ ಜನರು ಪ್ರಾಣ ಕಳೆದುಕೊಂಡರು ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಬ್ಯಾಂಕ್‌ನಿಂದ ಹಣ ಪಡೆಯಲು ಎರಡು ಮೂರು ಗಂಟೆ ನಿಂತಿದ್ದಕ್ಕೆ ಜನರು ಪ್ರಾಣ ಕಳೆದುಕೊಂಡರು ಎಂದು ಕೇಳುವುದು ಅಚ್ಚರಿ ಮೂಡಿಸುತ್ತದೆ ಎಂದು ಘೋಷ್ ಹೇಳಿದರು.
ಆದರೆ ಈಗ ಪೌರತ್ವ ಕಾಯ್ದೆ ಹೆಸರಲ್ಲಿ ನೂರಾರು ಮಕ್ಕಳು ಮತ್ತು ಮಹಿಳೆಯರು ಕೊರೆಯುವ ಚಳಿಯಲ್ಲಿ ಹಗಲು ರಾತ್ರಿ ಕೂರುತ್ತಿದ್ದಾರೆ. ಯಾರಿಗೂ ಏನೂ ಆಗುತ್ತಿಲ್ಲವಲ್ಲ ಎಂದು ಅವರು ಇದೇ ಸಂದರ್ಭ ವ್ಯಂಗ್ಯವಾಡಿದರು.