ಹೈದರಾಬಾದ್: ಟೀಂ ಇಂಡಿಯಾ ಯಶಸ್ವಿ ನಾಯಕನಾಗಿದ್ದ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಮೊದಲ ಶತಕ ಸಿಡಿಸಿ ಇಂದಿಗೆ 15 ವರ್ಷ ಮುಕ್ತಾಯಗೊಂಡಿದೆ.
ವಿಶಾಖಪಟ್ಟಣಂ ಮೈದಾನದಲ್ಲಿ ಪಾಕ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 123 ಎಸೆತಗಳಲ್ಲಿ 148 ನರ್ ಗಳಿಕೆ ಮಾಡಿದ್ದ ಧೋನಿ ಟೀಂ ಇಂಡಿಯಾ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಪಾಕ್ ಬ್ಯಾಟ್ಸ್ಮನ್ಗಳಿಗೆ ಮಾರಕವಾಗಿ ಕಾಡಿದ್ದ ವೇಗಿ ಆಶಿಶ್ ನೆಹ್ರಾ 4 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ತಮ್ಮ ಕೊಡುಗೆ ನೀಡಿದ್ದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಮಾಜಿ ಬೌಲರ್ ನೆಹ್ರಾ ಮಾತನಾಡಿದ್ದಾರೆ. ಎಂಎಸ್ ಧೋನಿ ಅದ್ಭುತ ವಿಕೆಟ್ ಕೀಪರ್ ಏನು ಆಗಿರಲಿಲ್ಲ. ಆದರೆ ಅವರ ಕ್ರಿಕೆಟ್ ಜೀವನ ಬದಲಿಸಿದ್ದು ಆ ಒಂದು ಇನ್ನಿಂಗ್ಸ್ ಎಂದಿದ್ದಾರೆ. ಆ ಒಂದು ಇನ್ನಿಂಗ್ಸ್ನಿಂದಲೇ ಅವರ ಬ್ಯಾಟಿಂಗ್ ಶೈಲಿಯಲ್ಲೇ ಬದಲಾವಣೆಯಾಗಿದ್ದು, ಇದಾದ ಬಳಿಕ ಅವರ ಆತ್ಮವಿಶ್ವಾಸ ಹೆಚ್ಚಾಗಿ ತಂಡದ ಅದ್ಭುತ ಕ್ರಿಕೆಟರ್ ಆಗಿ ಬದಲಾದರು ಎಂದಿದ್ದಾರೆ.
ಆರಂಭದಲ್ಲಿ ದಿನೇಶ್ ಕಾರ್ತಿಕ್ ಹಾಗೂ ಪಾರ್ಥಿವ್ ಪಟೇಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸುತ್ತಿದ್ದರು. ತದನಂತರ ಧೋನಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಪರಿವರ್ತನೆಗೊಂಡರು ಎಂದಿದ್ದಾರೆ. ಇದೇ ವೇಳೆ, ರಿಷಭ್ ಪಂತ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿರುವ ನೆಹ್ರಾ, ಧೋನಿ ಮಾಡಿರುವ ಸಾಧನೆ ಈ ಕ್ರಿಕೆಟರ್ನಿಂದ ಮಾತ್ರ ಮಾಡಲು ಸಾಧ್ಯ ಎಂದಿದ್ದಾರೆ.