ನವದೆಹಲಿ: ತಂತ್ರಜ್ಞರು ಮತ್ತು ವೃತ್ತಿಪರರಿಗೆ ಅಮೆರಿಕದಲ್ಲಿ ಉದ್ಯೋಗ ದೊರಕಿಸಿಕೊಡುವ ಎಚ್-1 ಬಿ ವೀಸಾ ವಲಸೆ ನೀತಿಗಳಿಗೆ ಕಡಿವಾಣ ಹಾಕಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ, ಪ್ರಧಾನಿ ಮೋದಿ 'ಹೌಡಿ ಮೋಡಿ' ಸಮಾವೇಶ ನಡೆಸಿದ್ದರೂ ಫಲಕಾರಿ ಆಗಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿಕಾರಿದ್ದಾರೆ.
ಟ್ರಂಪ್ ಆಡಳಿತದ ನಿರ್ಬಂಧಿತ ವಲಸೆ ನೀತಿಗಳು ಭಾರತದ ಪ್ರಮುಖ ಐಟಿ ಕಂಪನಿಗಳಲ್ಲಿ ಅತಿ ಹೆಚ್ಚು ನಿರಾಕರಣೆಗೆ ಒಳಗಾದ ಎಚ್-1 ಬಿ ವೀಸಾ ಸಂಬಂಧಿತ ಅರ್ಜಿಗಳು ತಿರಸ್ಕರಿಸಲ್ಪಟ್ಟಿವೆ ಎಂಬ ವರದಿಯನ್ನು ಮುಂದಿಟ್ಟುಕೊಂಡು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವಿಟ್ಟರ್ನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ ಯಾರ ಕಲ್ಯಾಣ ಮಾಡುತ್ತಿದೆ ಎಂಬ ಪ್ರಶ್ನೆಯನ್ನು ಎಲ್ಲರೂ ಕೇಳಬೇಕು. ಪ್ರಧಾನಿ ಅಮೆರಿಕಕ್ಕೆ ಹೋಗಿ 'ಹೌಡಿ ಮೋದಿ'ಯಲ್ಲಿ ಭಾಗವಹಿಸಿದ್ದರು. ಆದರೆ, ಅಲ್ಲಿ ಕೆಲಸ ಮಾಡಲು ಬಯಸುವ ಭಾರತೀಯರಿಗೆ ಅಮೆರಿಕವು ಎಚ್ -1 ಬಿ ವೀಸಾಗಳನ್ನು ಹೆಚ್ಚಿಸಲು ನಿರಾಕರಿಸುತ್ತಿದೆ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.
ದೇಶದ ಆರ್ಥಿಕ ಸ್ಥಿತಿ ಕೆಟ್ಟದಾಗಿದೆ. ಸೇವಾ ವಲಯ ಸಮತಟ್ಟಾಗಿದೆ. ಉದ್ಯೋಗ ಕಡಿಮೆಯಾಗುತ್ತಿದೆ. ಸಾಮಾನ್ಯ ಜನರು ದಣಿಯುತ್ತಿರುವಾಗ ಅಧಿಕಾರದಲ್ಲಿ ಇರುವವರು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಇನ್ನೊಂದು ಟ್ವೀಟ್ನಲ್ಲಿ ಆಪಾದಿಸಿದ್ದಾರೆ.