ನವದೆಹಲಿ: ಕೋವಿಡ್ ಲಾಕ್‌ಡೌನ್ ಪ್ರಾರಂಭವಾದಗಿನಿಂದ ದೆಹಲಿ-ಎನ್‌ಸಿಆರ್ ಪ್ರದೇಶಗಳಲ್ಲಿ ಗಾಂಜಾ ಮತ್ತು ಅಫೀಮು ಕಳ್ಳಸಾಗಣಿಕೆ ಇದ್ದಕ್ಕಿದ್ದಂತೆ ಹೆಚ್ಚಾಗಿದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಹೇಳಿದೆ.
ಕೊರೊನಾ ವೈರಸ್ ಹರಡುವುದನ್ನು ತಡೆಯಲು ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಕೊಕೇನ್ ಮತ್ತು ಹೆರಾಯಿನ್ ಸರಬರಾಜು ಬಹುತೇಕ ಸ್ಥಗಿತಗೊಂಡಿದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ತನಿಖೆಯಿಂದ ತಿಳಿದುಬಂದಿದೆ. ಈ ಕಾರಣದಿಂದಾಗಿ, ಮಾದಕ ವ್ಯಸನಿಗಳಲ್ಲಿ ಗಾಂಜಾ ಮತ್ತು ಅಫೀಮು ಬೇಡಿಕೆ ಹೆಚ್ಚಾಗಿದ್ದು, ಅದರ ಕಳ್ಳಸಾಗಣೆ ಹೆಚ್ಚಾಗಿದೆ.
ಲಾಕ್‌ಡೌನ್ ಸಮಯದಲ್ಲಿ, 400 ಕೆ.ಜಿ ಅಫೀಮು ಮತ್ತು 2000 ಕೆ.ಜಿ ಗಾಂಜಾವನ್ನು ಕಳ್ಳಸಾಗಾಣಿಕೆದಾರರಿಂದ ಎನ್‌ಸಿಬಿ ವಶಪಡಿಸಿಕೊಂಡಿದೆ. ಭಾರತದಲ್ಲಿ ಕೊಕೇನ್ ಮತ್ತು ಹೆರಾಯಿನ್ ಕಳ್ಳಸಾಗಾಣಿಕೆಗೆ ವಾಯು ಮಾರ್ಗವನ್ನು ಬಳಸಲಾಗುತ್ತಿತ್ತು. ಲಾಕ್‌ಡೌನ್ ಸಮಯದಲ್ಲಿ ವಿಮಾನ ಮಾರ್ಗಗಳನ್ನು ಮುಚ್ಚಿದ್ದರಿಂದ ಈ ಎರಡು ಡ್ರಗ್ಸ್ ಭಾರತಕ್ಕೆ ಬರುತ್ತಿಲ್ಲ ಎಂದು ಎನ್‌ಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.