ನವದೆಹಲಿ: ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ನೊಂದವರ ಹಾಗೂ ಅಲ್ಲಿನ ಜನರ ಸುರಕ್ಷತೆಗೆ ಪೊಲೀಸರು ಯಾವೆಲ್ಲ ಕ್ರಮಗಳನ್ನ ಕೈಗೊಂಡಿದ್ದಾರೆ ಹಾಗೂ ಪುನರ್ವಸತಿ ಮತ್ತು ವೈದ್ಯಕೀಯ ಕ್ರಮಗಳ ಕುರಿತಂತೆ ವರದಿ ಸಲ್ಲಿಸುವಂತೆ ಹೈಕೋರ್ಟ್ ಪೊಲೀಸರಿಗೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ. ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಸಿ .ಹರಿಶಂಕರ್ ಅವರಿದ್ದ ನ್ಯಾಯಪೀಠವು ಫೆಬ್ರವರಿ 26 ರ ಆದೇಶಕ್ಕೆ ಅನುಸಾರವಾಗಿ ತಾವು ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿತು. ಏಪ್ರಿಲ್ 30ಕ್ಕೆ ವಿಚಾರಣೆಯನ್ನು ಮುಂದೂಡಿತು.
ಇದೇ ವೇಳೆ, ದೆಹಲಿ ಸರ್ಕಾರದ ಸ್ಥಾಯಿ ಸಲಹೆಗಾರ ರಾಹುಲ್ ಮೆಹ್ರಾ, ರಾಷ್ಟ್ರ ರಾಜಧಾನಿಯ ಇತರ ಪ್ರದೇಶಗಳಲ್ಲಿ ಗಲಭೆಗಳು ಭುಗಿಲೆದ್ದಿರುವ ಬಗ್ಗೆ ಹರಡುತ್ತಿರುವ ವದಂತಿಗಳ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದು, ಇಂತಹ ವದಂತಿಗಳನ್ನು ನಿಭಾಯಿಸುವಲ್ಲಿ ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದೂ ಕೂಡಾ ಪೀಠ ಹೇಳಿದೆ.
ಇನ್ನು ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಸುಮಾರು 46 ಜನರು ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.