ನವದೆಹಲಿ: ದೆಹಲಿ ಹಿಂಸಾಚಾರ ಕುರಿತ ಯಾವುದೇ ವರದಿ ಅಥವಾ ವದಂತಿಗಳನ್ನು ಪರಿಶೀಲಿಸಲು ದೆಹಲಿ ಪೊಲೀಸರು ಇಂದು ರಾಷ್ಟ್ರ ರಾಜಧಾನಿಯ ವಿವಿಧ ಪ್ರದೇಶಗಳ ನಿವಾಸಿಗಳಿಗೆ 16 ಸಹಾಯವಾಣಿ ಸಂಖ್ಯೆಗಳನ್ನು ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ದೆಹಲಿ ಹಿಂಸಾಚಾರದ ಕುರಿತು ಸುಳ್ಳು ವದಂತಿಗಳು ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಭಯ ಮೂಡಿಸಲು ಕೆಲವರು ಹೀಗೆ ಮಾಡುತ್ತಿದ್ದಾರೆ. ಅಂತಹ ವದಂತಿಗಳಿಗೆ ಗಮನ ಕೊಡಬಾರದು ಎಂದು ಪ್ರಕಟಣೆಯಲ್ಲಿ ದೆಹಲಿ ಪೊಲೀಸರು ಜನತೆಗೆ ತಿಳಿಸಿದ್ದಾರೆ.
ಹೀಗೆ ಸುಳ್ಳು ಸುದ್ದಿ ಪಸರಿಸುತ್ತಿರುವ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಪೊಲೀಸರು, ರೈಲ್ವೆ ಸೇರಿದಂತೆ ದೆಹಲಿಯ ವಿವಿಧ ಭಾಗಗಳಿಗೆ 16 ಸಹಾಯವಾಣಿ ಸಂಖ್ಯೆಗಳನ್ನು ನೀಡಿದ್ದಾರೆ.
ದ್ವೇಷವನ್ನು ಪಸರಿಸುವಂತಹ ಯಾವುದೇ ಸಂದೇಶಗಳನ್ನು ಕಂಡರೆ, ಸೈಬರ್ ಸಹಾಯವಾಣಿ ಸಂಖ್ಯೆ -155260 ಅಥವಾ www.cybercrime.gov.in ನಲ್ಲಿ ಸಾರ್ವಜನಿಕರು ದೂರು ನೀಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.