ನವದೆಹಲಿ: ಪ್ರೈಮ್ ವಸತಿ ಸೌಕರ್ಯ ವರದಿ -2018ರ ಅನ್ವಯ, ಮುಂಬೈ ಅತ್ಯಂತ ದುಬಾರಿ ಮಾರುಕಟ್ಟೆಯ ಹಾಗೂ ದೆಹಲಿ ಅತ್ಯಧಿಕ ಬೆಲೆಯ ಪ್ರೈಮ್ ವಸಿತಿ ಸಿಟಿ ಎಂಬ ಹೆಗ್ಗಳಿಕೆ ಪಡೆದಿದೆ.
ಪ್ರೈಮ್ ವಸತಿ ಸೌಕರ್ಯದ 2017ರ ವರದಿಯಲ್ಲಿ ದೆಹಲಿ ಇದಕ್ಕೂ ಕೆಳಗಿನ ಸ್ಥಾನ ಪಡೆದಿದ್ದು, ಅದರ ಮರು ವರ್ಷದಲ್ಲಿ ಮತ್ತೆ ನಂ.1 ಸ್ಥಾನಕ್ಕೆ ಬಂದಿದೆ. 2019ರ ಜನವರಿ- ಮಾರ್ಚ್ ತ್ರೈಮಾಸಿಕ ಅವಧಿಯಲ್ಲಿ ರಾಷ್ಟ್ರ ರಾಜಧಾನಿಯ ವಸತಿ ಸಮುಚ್ಚಯ ಶೇ 4.4ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ನೈಟ್ ಫ್ರಾಂಕ್ ವೆಲ್ತ್ ಸಿದ್ಧಪಡಿಸಿದ ವರದಿಯಲ್ಲಿ ತಿಳಿಸಿದೆ.
2019ರಲ್ಲಿ ಪ್ರತಿ ಚದರ ಅಡಿ ₹ 33,507ರ ದರದಲ್ಲಿ ಮಾರಾಟವಾಗುತ್ತಿದ್ದು, 2018 ರಿಂದ ಶೇ 1.2ರಷ್ಟು ವೃದ್ಧಿಸುತ್ತಿದೆ. 2015ರಲ್ಲಿ ಪ್ರತಿ ಚದರ ಅಡಿ ₹ 34,073 ಕೊಟ್ಟು ಜನ ಖರೀದಿಸುತ್ತಿದ್ದರು ಎಂದಿದೆ.
2019 ಪ್ರಥಮ ತ್ರೈಮಾಸಿಕದಲ್ಲಿ ವಾಣಿಜ್ಯ ನಗರಿ ಮುಂಬೈನಲ್ಲಿನ ಪ್ರತಿ ಚದರ ಅಡಿ ವಸತಿ ₹ 64,649ಗೆ ಮಾರಾಟ ಆಗುತ್ತಿದೆ. ಈ ಮೂಲಕ ಅತ್ಯಂತ ದುಬಾರಿ ವೆಚ್ಚದ ಸಿಟಿ ಎಂಬ ಹಣೆಪಟ್ಟಿ ಹೊಂದಿದೆ. ಸಿಲಿಕಾನ್ ಸಿಟಿ ಬೆಂಗಳೂರು ಪ್ರೈಮ್ ಪ್ರಾಪರ್ಟಿ ಶ್ರೇಣಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಪ್ರತಿ ಚದರ ಅಡಿ ₹ 19,447 ದರವಿದೆ ಎಂದು ವಿವರಿಸಿದೆ.
ಜಾಗತಿಕವಾಗಿ ಹಾಂಕಾಂಗ್ ಮತ್ತೆ ನಂಬರ್ 1 ಸ್ಥಾನದಲ್ಲಿದ್ದು, ಇಂಗ್ಲೆಂಡಿನ ಲಂಡನ್ ಹಾಗೂ ಅಮೆರಿಕದ ನ್ಯೂಯಾರ್ಕ್ ನಂತರದ ಎರಡು ಸ್ಥಾನಗಳಲ್ಲಿ ಮುಂದುವರಿದಿವೆ ಎಂದು ನೈಟ್ ಫ್ರಾಂಕ್ ವೆಲ್ತ್ ತಿಳಿಸಿದೆ.