ನವದೆಹಲಿ: ದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ನಿರುದ್ಯೋಗವಿದೆ ಎಂದು ಕೇಂದ್ರ ಸರ್ಕಾರ ಹೇಳಿದ ಬೆನ್ನಲ್ಲೇ ದೆಹಲಿಯ ಅಂಬೇಡ್ಕರ್ ನಗರದಲ್ಲಿರುವ ಕೋವಿಡ್ ಆಸ್ಪತ್ರೆ ವಿಚಿತ್ರ ಸನ್ನಿವೇಶವೊಂದಕ್ಕೆ ಸಾಕ್ಷಿಯಾಗಿದೆ.
ಆಗಸ್ಟ್ 9ರಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ 200 ಹಾಸಿಗೆಗಳ ಸಾಮರ್ಥ್ಯದ ಕೋವಿಡ್ ಆಸ್ಪತ್ರೆಯನ್ನು ಉದ್ಘಾಟಿಸಿದ್ದರು. ಆಸ್ಪತ್ರೆ ಕಾರ್ಯರೂಪಕ್ಕೆ ಬಂದಾಗಿನಿಂದ ಚಿಕಿತ್ಸೆಗೆ ಬರುವವರ ಜೊತೆಗೆ ಉದ್ಯೋಗ ಅರಸಿ ಬರುವವರ ಸಂಖ್ಯೆಯೂ ಕೂಡಾ ಹೆಚ್ಚಾಗುತ್ತಿದೆ.
ಆಸ್ಪತ್ರೆಗೆ ಉದ್ಯೋಗ ಅರಸಿ ಬರುವುದು ಮಾತ್ರವಲ್ಲದೇ ಆಸ್ಪತ್ರೆ ಸಿಬ್ಬಂದಿ ಬಳಿ ಸತತವಾಗಿ ಕೆಲಸದ ಬಗ್ಗೆ ವಿಚಾರಿಸುತ್ತಿದ್ದಾರೆ. ಇದರಿಂದ ಅನಿವಾರ್ಯವಾಗಿ ಕೋವಿಡ್ ಆಸ್ಪತ್ರೆ ಮುಂಭಾಗದ ಗೇಟ್ ಬಳಿ ನೋ ವೆಕೆನ್ಸಿ ಬೋರ್ಡ್ ಅನ್ನು ಹಾಕಬೇಕಾದ ಅನಿವಾರ್ಯತೆಗೆ ಅಲ್ಲಿನ ಆಸ್ಪತ್ರೆ ಆಡಳಿತ ಮಂಡಳಿ ಬಂದಿದೆ.
ಈ ಬಗ್ಗೆ ಉದ್ಯೋಗ ಅರಸಿ ಬಂದವರೊಬ್ಬರು 'ಈಟಿವಿ ಭಾರತ'ದೊಂದಿಗೆ ಮಾತನಾಡಿ ಆಸ್ಪತ್ರೆ ತೆರೆದ ಮೊದಲ ದಿನದಿಂದಲೂ ನಾನು ಇಲ್ಲಿಗೆ ಬರುತ್ತಿದ್ದೇನೆ. ಆದರೆ ಯಾರೊಬ್ಬರೂ ನಮ್ಮ ರೆಸ್ಯೂಮ್ಗಳನ್ನು ತೆಗೆದುಕೊಳ್ಳುತ್ತಿಲ್ಲ. ಕೆಲಸ ಖಾಲಿ ಇಲ್ಲವೆಂದು ಹೇಳುತ್ತಿದ್ದಾರೆ. ಆಂತರಿಕವಾಗಿ, ತಮಗಿಷ್ಟ ಬಂದಂತೆ ಉದ್ಯೋಗಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.