ನವದೆಹಲಿ: ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಸದ್ಯ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಜಾಮೀನು ಅರ್ಜಿಯ ತೀರ್ಪು ಇಂದು ಹೊರಬೀಳುವ ಸಾಧ್ಯತೆಯಿದೆ.
ದೆಹಲಿ ಹೈಕೋರ್ಟ್ನಲ್ಲಿ ಜಾಮೀನು ಕೋರಿ ಪಿ.ಚಿದಂಬರಂ ಅರ್ಜಿ ಸಲ್ಲಿಸಿದ್ದರು. ಈಗಾಗಲೇ ಚಿದಂಬರಂ ಮತ್ತು ಜಾರಿ ನಿರ್ದೇಶನಾಲಯದ ಪರ ವಕೀಲರ ವಾದವನ್ನ ಆಲಿಸಿರುವ ದೆಹಲಿ ಹೈಕೋರ್ಟ್ ನ್ಯಾ.ಸುರೇಶ್ ಕೈಟ್, ನವೆಂಬರ್ 8 ರಂದು ತೀರ್ಪು ಕಾಯ್ದಿರಿಸಿದ್ದರು.
ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಪ್ರತ್ಯೇಕ ಕೇಸ್ಗಳನ್ನ ದಾಖಲಿಸಿದ್ದು, ಸದ್ಯ ಸಿಬಿಐ ದಾಖಲಿಸಿದ್ದ ಕೇಸ್ನಲ್ಲಿ ಅಕ್ಟೋಬರ್ 22 ರಂದು ಚಿದಂಬರಂಗೆ ಜಾಮೀನು ಸಿಕ್ಕಿದೆ. ಆದರೆ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣದಲ್ಲಿ ಇನ್ನೂ ಜಾಮೀನು ಸಿಕ್ಕಿಲ್ಲ. ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ಚಿದಂಬರಂ ನ್ಯಾಯಾಂಗ ಬಂಧನದ ಅವಧಿ ನವೆಂಬರ್ 27 ರ ವರೆಗೂ ಇದೆ. ಹಾಗಾಗಿ ಇಂದು ಜಾಮೀನು ಸಿಕ್ಕಿದಲ್ಲಿ ತಿಹಾರ್ನಿಂದ ಚಿದಂಬರಂ ಬಿಡುಗಡೆಯಾಗಲಿದ್ದಾರೆ.