ನವದೆಹಲಿ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಯೊಬ್ಬ ಡಿಸೆಂಬರ್ 15 ರ ರಂದು ನಡೆದ ಹಿಂಸಾಚಾರದಲ್ಲಿ ಗಾಯಗೊಂಡಿದ್ದೇನೆ ಎಂದು 2 ಕೋಟಿ ರೂ.ಗಳ ಪರಿಹಾರವನ್ನು ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ದೆಹಲಿ ಹೈಕೋರ್ಟ್ ಕೇಂದ್ರಕ್ಕೆ ನೋಟಿಸ್ ನೀಡಿದೆ.
ಅರ್ಜಿಯಲ್ಲಿ, ಪೌರತ್ವ ಕಾಯ್ದೆಯ ವಿರುದ್ಧದ ಪ್ರತಿಭಟನೆಯಲ್ಲಿ ತನಗೆ ಗಾಯಗಳಾಗಿವೆ ಎಂದು ಶಯಾನ್ ಮುಜೀಬ್ ಎಂಬ ವಿದ್ಯಾರ್ಥಿ ನ್ಯಾಯಾಲಯದ ಮೊರೆ ಹೋಗಿದ್ದ. ಅಲ್ಲದೆ, ಚಿಕಿತ್ಸೆಗಾಗಿ 2.5 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದೇನೆ ಎಂದು ವಾದಿಸಿದ್ದಾನೆ.
ಘಟನೆ ಹಿನ್ನೆಲೆ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ನ್ಯಾಯಾಲಯ ನೋಟಿಸ್ ನೀಡಿದೆ. ಮೇ 27 ರೊಳಗೆ ಪ್ರತಿಕ್ರಿಯೆ ನೀಡಬೇಕೆಂದು ತಿಳಿಸಿದೆ. ವಿದ್ಯಾರ್ಥಿ ಪರ ವಾದ ಮಾಡಿದ ವಕೀಲರು, ವಿದ್ಯಾರ್ಥಿಯ ಎರಡೂ ಕಾಲುಗಳಿಗೆ ಗಂಭೀರವಾಗಿ ಗಾಯವಾಗಿವೆ. ಆತನ ಜೀವನ ಕಷ್ಟಕರವಾಗಿದೆ ಎಂದ ನ್ಯಾಯಾಲಯಕ್ಕೆ ತಿಳಿಸಿದರು.
ಏನಿದು ಘಟನೆ:
ಡಿಸೆಂಬರ್ 15 ರಂದು ಸಿಎಎ ವಿರುದ್ಧ ದೆಹಲಿಯ ಜಾಮಿಯಾ ನಗರ ಬಳಿ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಆ ವೇಳೆ 14 ಬಸ್‌ಗಳು ಹಾಗೂ 20 ಖಾಸಗಿ ವಾಹನಗಳನ್ನು ಸುಡಲಾಗಿತ್ತು.
31 ಪೊಲೀಸ್ ಅಧಿಕಾರಿಗಳು ಸೇರಿದಂತೆ ಅರವತ್ತೇಳು ಮಂದಿ ಗಾಯಗೊಂಡಿದ್ದರು. ಘಟನೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 47 ಜನರನ್ನು ವಶಕ್ಕೆ ಪಡೆಯಲಾಗಿದೆ.