ನವದೆಹಲಿ: ಸಲಿಂಗ ವಿವಾಹಕ್ಕೆ ಹಿಂದೂ ವಿವಾಹ ಕಾಯ್ದೆ ಹಾಗೂ ವಿಶೇಷ ವಿವಾಹ ಕಾಯ್ದೆ ಅಡಿ ಮಾನ್ಯತೆ ನೀಡಬೇಕು ಎಂದು ಕೋರಿ ದೆಹಲಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಿದ್ದ ಪಿಐಎಲ್ಗೆ ತನ್ನ ಅಭಿಪ್ರಾಯ ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ನೋಟಿಸ್ ನೀಡಿದೆ. ಹಿಂದೂ ವಿವಾಹ ಕಾಯ್ದೆ (ಎಚ್‌ಎಂಎ) ಮತ್ತು ವಿಶೇಷ ವಿವಾಹ ಕಾಯ್ದೆ (ಎಸ್‌ಎಂಎ) ಅಡಿ ಸಲಿಂಗ ವಿವಾಹಗಳನ್ನು ಗುರುತಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ಮೇರೆಗೆ ದೆಹಲಿ ಹೈಕೋರ್ಟ್ ಗುರುವಾರ ಕೇಂದ್ರಕ್ಕೆ ನೋಟಿಸ್ ನೀಡಿದೆ. ನಾಲ್ಕು ವಾರಗಳಲ್ಲಿ ಉತ್ತರ ಸಲ್ಲಿಸುವಂತೆ ನಿರ್ದೇಶಿಸಿದೆ.
ನ್ಯಾಯಮೂರ್ತಿಗಳಾದ ರಾಜೀವ್ ಸಹೈ ಎಂಡ್ಲಾ ಮತ್ತು ಆಶಾ ಮೆನನ್ ಅವರ ನ್ಯಾಯಪೀಠ ಕೇಂದ್ರಕ್ಕೆ ನೋಟಿಸ್ ನೀಡಿದೆ. ಸಲಿಂಗಕಾಮಿ ಮತ್ತು ಎಲ್‌ಜಿಬಿಟಿ ಸಮುದಾಯದ ಸದಸ್ಯರು ಮತ್ತು ಕಾರ್ಯಕರ್ತರಾದ ಅಭಿಜಿತ್ ಅಯ್ಯರ್ ಮಿತ್ರ, ಗೋಪಿಶಂಕರ್ ಎಂ., ಗೀತಿ ಥಡಾನಿ ಮತ್ತು ಜಿ.ಊರ್ವಸಿ ಅವರು ಪಿಐಎಲ್ ಸಲ್ಲಿಸಿದ್ದಾರೆ.
ಸಲಿಂಗಕಾಮಿ ದಂಪತಿಗಳಿಗೆ ವಿರುದ್ಧ ಲೈಂಗಿಕ ದಂಪತಿಗಳಂತೆ ಸಮಾನ ಹಕ್ಕುಗಳು ಮತ್ತು ಸೌಲಭ್ಯಗಳು ಇರಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 5 ರ ಅಡಿ ಹಿಂದೂ ಪುರುಷನನ್ನು ಹಿಂದೂ ಮಹಿಳೆಗೆ ಮಾತ್ರ ಮದುವೆಯಾಗಬಹುದು ಎಂಬ ಉಲ್ಲೇಖವಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಮದುವೆಯಾಗುವ ಹಕ್ಕನ್ನು ಮಾನವ ಹಕ್ಕುಗಳ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಸಾರ್ವತ್ರಿಕ ಹಕ್ಕಾಗಿದೆ ಮತ್ತು ಪ್ರತಿಯೊಬ್ಬರೂ ಈ ಹಕ್ಕುಗಳನ್ನು ಪಡೆಯಬೇಕು. ಲಿಂಗ ಆಧಾರದ ಮೇಲೆ ಮದುವೆಗೆ ಅವಕಾಶ ನೀಡದಿರುವುದು ಸಲಿಂಗಕಾಮಿಗಳ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಈ ಹಿಂದೆ ಸೆಪ್ಟೆಂಬರ್ 14 ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, ಹಿಂದೂ ವಿವಾಹ ಕಾಯ್ದೆಯಡಿ ಸಲಿಂಗಕಾಮಿ ವಿವಾಹಗಳಿಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ವಿರೋಧಿಸಿತ್ತು. ನಮ್ಮ ಕಾನೂನು ವ್ಯವಸ್ಥೆ, ಸಮಾಜ ಮತ್ತು ಸಂಸ್ಕೃತಿ ಸಲಿಂಗಕಾಮಿ ದಂಪತಿಗಳ ನಡುವಿನ ಮದುವೆಯನ್ನು ಗುರುತಿಸುವುದಿಲ್ಲ ಎಂದು ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದರು.
ಭಾರತದಲ್ಲಿ ಸಲಿಂಗಕಾಮ ಅಪರಾಧವಲ್ಲ ಎಂದು 2018 ರಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ತೀರ್ಪು ನೀಡಿತ್ತು.