ಹೊಸದಿಲ್ಲಿ: ದೆಹಲಿ ಮೂಲಕ ಸಂಚರಿಸುವ ರಾಜಧಾನಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕ್ವಾರಂಟೈನ್ (ಪ್ರತ್ಯೇಕಿಸುವಿಕೆ) ಮುದ್ರೆ ಹೊಂದಿದ್ದ ವ್ಯಕ್ತಿ ಹಾಗೂ ಆತನ ಪತ್ನಿಯನ್ನು ಪೊಲೀಸರು ರೈಲಿನಿಂದ ಕೆಳಗಿಳಿಸಿದ ಘಟನೆ ಶನಿವಾರ ನಡೆದಿದೆ. ದೆಹಲಿ ಮೂಲದ ಈ ದಂಪತಿ ಸಿಕಂದರಾಬಾದ್ನಲ್ಲಿ ಬೆಂಗಳೂರು ಸಿಟಿ-ಹೊಸದಿಲ್ಲಿ ರಾಜಧಾನಿ ರೈಲಿಗೆ ಹತ್ತಿದ್ದರು.
ರೈಲು ಬೆಳಗ್ಗೆ 9.45ರ ಸುಮಾರಿಗೆ ತೆಲಂಗಾಣದ ಕಾಝಿಪೇಟ್ ಬಳಿ ಬಂದಾಗ ಸಹ ಪ್ರಯಾಣಿಕರೊಬ್ಬರು ವ್ಯಕ್ತಿಯೊಬ್ಬರ ಕೈ ಮೇಲೆ ಕೊರೊನಾ ವೈರಸ್ ಶಂಕಿತರಿಗೆ ಹಾಕುವ ಕ್ವಾರಂಟೈನ್ ಮುದ್ರೆ ಇರುವುದನ್ನು ಗಮನಿಸಿದ್ದಾರೆ. ಈ ವಿಷಯ ಇತರ ಪ್ರಯಾಣಿಕರಿಗೂ ತಿಳಿದ ನಂತರ ಟಿಕೆಟ್ ಪರೀಕ್ಷಕರ ಗಮನಕ್ಕೆ ತರಲಾಗಿದೆ.
ತಕ್ಷಣ ರೈಲನ್ನು ನಿಲ್ಲಿಸಿ ವ್ಯಕ್ತಿಯನ್ನು ಕೆಳಗಿಳಿಸಿ ಆಸ್ಪತ್ರೆಗೆ ಕಳುಹಿಸಲಾಗಿದೆ. ನಂತರ ಕಾಝಿಪೇಟ್ ನಿಲ್ದಾಣದಲ್ಲಿಯೇ ಸಂಪೂರ್ಣ ಬೋಗಿಯನ್ನು ಸ್ಯಾನಿಟೈಸರ್ ಬಳಸಿ ಸ್ವಚ್ಛ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗಿನ ಜಾವ 11.30ರ ಸುಮಾರಿಗೆ ರೈಲು ಮುಂದಕ್ಕೆ ಪ್ರಯಾಣ ಬೆಳೆಸಿದೆ.