ಮೆಹಬೂಬಾಬಾದ್ (ತೆಲಂಗಾಣ): ಪತ್ರಕರ್ತರೊಬ್ಬರ ಪುತ್ರನನ್ನು ಅಪಹರಿಸಿ ಕೊಂದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದ್ದು, ಅತ್ಯಂತ ಗಂಭೀರ ವಿಚಾರಗಳು ಬೆಳಕಿಗೆ ಬಂದಿವೆ.
ಭಾನುವಾರ ಸಂಜೆ 5.30ರ ವೇಳೆಗೆ ಆರೋಪಿಗಳು ಬಾಲಕ ದೀಕ್ಷಿತ್ನನ್ನ ಅಪಹರಿಸಿ ಬೈಕ್‌ನಲ್ಲಿ ಕೇಶಮುದ್ರಂ ವಲಯದಲ್ಲಿ ಬರುವ ಅನ್ನಾರಂ ಗ್ರಾಮದ ಬಳಿಯ ದನಮಯ್ಯ ಬೆಟ್ಟಕ್ಕೆ ಕರೆದುಕೊಂಡು ಹೋಗಿದ್ದರು. ಅದೇ ದಿನ ರಾತ್ರಿ 9ಕ್ಕೆ ಪೋಷಕರಿಗೆ ಕರೆ ಮಾಡಿ 45 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.
ಇದನ್ನೂ ಓದಿ: ದುರಂತ ಅಂತ್ಯ ಕಂಡ ಮೆಹಬೂಬಾಬಾದ್ ಪತ್ರಕರ್ತನ ಪುತ್ರನ ಅಪಹರಣ ಪ್ರಕರಣ!
ಈ ವೇಳೆ ಬಾಲಕ ಮನೆಗೆ ತೆರಳಬೇಕೆಂದು ಕಿರುಚಾಡುತ್ತಿದ್ದಾಗ ಅದನ್ನು ತಪ್ಪಿಸಲು ನಿದ್ರೆಯ ಮಾತ್ರೆಗಳನ್ನು ಆತನಿಗೆ ತಿನ್ನಿಸಿದ್ದರು. ಇದಾದ ನಂತರ ಬಾಲಕನ ಕತ್ತನ್ನು ಟಿ-ಶರ್ಟ್ ಅನ್ನು ಬಳಸಿ, ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಅದಾದ ನಂತರ ಮಹಬೂಬಾಬಾದ್ಗೆ ಬಂದು ಪೆಟ್ರೋಲ್ ತೆಗೆದುಕೊಂಡು ಹೋಗಿ ದೇಹವನ್ನು ಸುಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಮನೋಜ್ ರೆಡ್ಡಿ, ಸಾಗರ್ ಎಂಬ ಇಬ್ಬರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.