ಬತಿಂಡಾ: ಭಾರತೀಯ ವಾಯುಪಡೆಯ(ಐಎಎಫ್)ನಿಷ್ಕ್ರಿಯ ಮಿಗ್ -21 ಯುದ್ಧವಿಮಾನವನ್ನು ಬುಧವಾರ ಭಾಯ್ ಕನ್ಹಯ್ಯ ಚೌಕ್‌ನಲ್ಲಿ ಸ್ಥಾಪಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಹಣಕಾಸು ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್ ಪರಿಶೀಲನೆ ನಡೆಸಿ ಮಾತನಾಡಿದರು.
ಇದು ಪಂಜಾಬಿಗಳ ತ್ಯಾಗ, ಧೈರ್ಯ, ಶೌರ್ಯಕ್ಕೆ ಧನ್ಯವಾದದ ಪ್ರತೀಕವಾಗಿದೆ. ಅಷ್ಟೇ ಅಲ್ಲದೇ, ಯುವ ಪೀಳಿಗೆ ಪ್ರತಿಷ್ಠಿತ ಸಶಸ್ತ್ರ ಪಡೆಗಳಿಗೆ ಸೇರಲು ಪ್ರೇರೇಪಿಸುತ್ತದೆ. ಜೊತೆಗೆ ದೇಶದ ಮೇಲೆ ಕೆಟ್ಟ ಕಣ್ಣಿಡುವವರಿಗೆ ಎಚ್ಚರಿಕೆ ಸೂಚಿಸುತ್ತದೆ ಎಂದು ಮನ್‌ಪ್ರೀತ್ ಬಾದಲ್ ಅಭಿಪ್ರಾಯಪಟ್ಟರು.
ಬತಿಂಡಾ ಅಭಿವೃದ್ಧಿ ಸಮಿತಿ (ಬಿಐಟಿ) ಅಧ್ಯಕ್ಷ ಕೆ. ಕೆ. ಅಗರ್ವಾಲ್ ಮಾತನಾಡಿ, “ ಕನ್ಹಯ್ಯ ಚೌಕ್‌ನಲ್ಲಿ ಯುದ್ಧ ವಿಮಾನವನ್ನು ಅಳವಡಿಸಲು ಬಿಐಟಿ 13.80 ಲಕ್ಷ ರೂ. ವೆಚ್ಚ ಮಾಡಲಿದೆ. 8.50 ಲಕ್ಷ ರೂಪಾಯಿಯನ್ನು ಪಾರ್ಕ್ ಸುಂದರತೆಗೆ ಪ್ರತ್ಯೇಕವಾಗಿ ವೆಚ್ಚಮಾಡಲಿದ್ದೇವೆ " ಎಂದು ತಿಳಿಸಿದರು.
ಅಕ್ಟೋಬರ್ 2018 ರಲ್ಲಿ, ಮೇಯರ್ ಬಲ್ವಂತ್ ರೈ ನಾಥ್ ಅವರು ಭಾರತೀಯ ವಾಯುಸೇನೆಯ ಉಪಾಧ್ಯಕ್ಷ ಏರ್ ಮಾರ್ಷಲ್ ಎಸ್.ಬಿ. ಡಿಯೊ ಅವರಿಗೆ ಪತ್ರವೊಂದನ್ನು ಬರೆದಿದ್ದು, ನಿಷ್ಕ್ರಿಯಗೊಂಡಿರುವ ಯುದ್ದ ವಿಮಾನವನ್ನು ಒದಗಿಸುವಂತೆ ಹಾಗೂ ಅದನ್ನು ಬಟಿಂಡಾ ನಗರದ ಚೌಕ್‌ನಲ್ಲಿ ಇರಿಸುವಂತೆಯೂ ವಿನಂತಿಸಿಕೊಂಡಿದ್ದರು. ಯುದ್ಧ ವಿಮಾನವನ್ನು ಚೌಕ್‌ನಲ್ಲಿ ಇರಿಸುವ ಮೂಲಕ ಪ್ರಜೆಗಳು, ಮುಖ್ಯವಾಗಿ ಮಕ್ಕಳು ಇವನ್ನು ನೋಡಿ ಪ್ರಭಾವಿತರಾಗುತ್ತಾರೆ. ದೇಶಕ್ಕಾಗಿ ತಮ್ಮ ಆಸೆ, ಆಕಾಂಕ್ಷೆಗಳನ್ನೂ ತ್ಯಾಗ ಮಾಡಲು ಸಿದ್ಧರಿರುತ್ತಾರೆ ಎನ್ನುವುದು ಬಲ್ವಂತ್ರ ನಿಲುವಾಗಿತ್ತು.