ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಸತತ ಮೂರು ದಿನಗಳ ಕಾಲ ನಡೆದ ಹಿಂಸಾಚಾರದಲ್ಲಿ ಬಲಿಯಾದವರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ.
ಗುರು ತೇಜ್ ಬಹದ್ದೂರ್ ಆಸ್ಪತ್ರೆಯಲ್ಲಿ 38, ಲೋಕ ನಾಯಕ್ ಆಸ್ಪತ್ರೆಯಲ್ಲಿ ಮೂರು, ಜಗ್ ಪರ್ವೇಶ್ ಚಂದರ್ ಆಸ್ಪತ್ರೆಯಲ್ಲಿ ಒಂದು ಹಾಗೂ ಡಾ.ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಐದು ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ.
ನಿನ್ನೆಯಷ್ಟೆ ದೆಹಲಿಯ ಗೋಕಲ್ಪುರಿ ಹಾಗೂ ಭಾಗೀರಥಿ ವಿಹಾರ್ ಕಾಲುವೆಯಲ್ಲಿ ಮೂರು ಶವಗಳು ಪತ್ತೆಯಾಗಿತ್ತು. ಇದೀಗ ಒಟ್ಟು 47 ಮಂದಿ ಬಲಿಯಾದಂತಾಗಿದೆ.
ಇನ್ನು ಹಿಂಸಾಚಾರ ಪ್ರಕರಣ ಸಂಬಂಧ 254 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ವಶಕ್ಕೆ ಪಡೆದುಕೊಂಡವರ ಹಾಗೂ ಬಂಧಿತರ ಸಂಖ್ಯೆ 903, ಅಲ್ಲದೇ 41 ಜನರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದಾಗಿ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಗಲಭೆಯ ಬಳಿಕವೂ ಅನೇಕ ಬ್ಯಾಂಕ್ಗಳು, ಎಟಿಎಂಗಳು ಬಂದ್ ಆಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.