ಹೈದರಾಬಾದ್ : ನಮ್ಮ ದೇಶದಲ್ಲಿ ಸುಮಾರು ಅರ್ಧದಷ್ಟು ನದಿಗಳ ನೀರು ಕುಡಿಯಲು ಯೋಗ್ಯ ಅಲ್ಲ. ಈ ಸಮಸ್ಯೆ ಕೇವಲ ನದಿಗಳಿಗೆ ಮಾತ್ರ ಸೀಮಿತ ಆಗಿಲ್ಲ. ಅಸಂಖ್ಯಾತ ಕೆರೆಗಳು, ಜಲಮೂಲಗಳು ಮಾತ್ರವಲ್ಲ ಅಂತರ್ಜಲ ಕೂಡ ಕಲುಷಿತಗೊಂಡಿದೆ.
ಹೈದರಾಬಾದ್ ಮಹಾನಗರದಲ್ಲಿ ಕೈಗಾರಿಕಾ ಮತ್ತು ರಾಸಾಯನಿಕ ತ್ಯಾಜ್ಯಗಳಿಂದಾಗಿ ಒಟ್ಟು ಸುಮಾರು 185 ಜಲಮೂಲಗಳು ವಿನಾಶದ ಅಂತಿಮ ಘಟ್ಟ ತಲುಪಿವೆ. ಕಳೆದ ಲಾಕ್‌ಡೌನ್ ವೇಳೆ ನೀರು ಮತ್ತು ಗಾಳಿಯ ಗುಣಮಟ್ಟ ಸ್ವಲ್ಪಮಟ್ಟಿಗೆ ಸುಧಾರಣೆ ಕಂಡಿತ್ತು. ಆದರೂ ಕೂಡ ಮಳೆಯ ನೀರಿನಲ್ಲಿ ತ್ಯಾಜ್ಯ ಹರಿದು ಬಿಡುತ್ತಿರುವ ಪರಿಣಾಮ ಅದೇ ಹಳೆಯ ಕಥೆ ಪುನರಾವರ್ತನೆ ಆಗುತ್ತಿದೆ. ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶಗಳು ದುರ್ವಾಸನೆ ಬೀರುತ್ತಿವೆ. ಹುಸೇನ್ ಸಾಗರ ಕೆರೆ ಸೇರಿ ನಗರದ ಎಲ್ಲಾ ನೀರಿನ ಮೂಲಗಳಿಗೆ ಟನ್ನುಗಟ್ಟಲೆ ರಾಸಾಯನಿಕ ತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ. ಜಲಮೂಲ ಶುದ್ಧೀಕರಣದ ಹೆಸರಿನಲ್ಲಿ ಸರ್ಕಾರ 400 ಕೋಟಿ ರೂ. ಬಿಡುಗಡೆ ಮಾಡಿದೆ.
ಜಲಮೂಲಗಳಿರುವ ಪ್ರದೇಶಗಳಲ್ಲಿ ಅತಿಕ್ರಮಣ ಹಾಗೂ ಅಕ್ರಮ ಮನೆ ನಿರ್ಮಾಣ ಆಗಿರುವ ಕುರಿತಂತೆ ಅಧಿಕಾರಿಗಳು ನಿದ್ದೆ ಮಾಡುತ್ತಿದ್ದಾರೆ ಎಂದು ತೆಲಂಗಾಣ ಹೈಕೋರ್ಟ್ ಛಾಟಿ ಬೀಸಿದೆ. ಸರ್ಕಾರ ‘ಹೈದರಾಬಾದನ್ನು ಜೈಸಲ್ಮೇರ್ ರೀತಿ ‘ ಪರಿವರ್ತನೆ ಮಾಡಲು ಮುಂದಾಗಿದೆಯೇ ಎಂದು ಕೋರ್ಟ್ ಕಳೆದ ಜನವರಿಯಲ್ಲಿ ಪ್ರಶ್ನಿಸಿತ್ತು. ಅದೇ ತಿಂಗಳು ಕೃಷ್ಣಾ ನದಿಯ ಉಪನದಿಯಾದ ‘ಮುನ್ನೇರು ವಾಗು’ವಿನಲ್ಲಿ ನಡೆದ ನೂರಾರು ಬಾತುಕೋಳಿಗಳ ಮಾರಣಹೋಮ ವಿವಾದಕ್ಕೆ ನಾಂದಿ ಹಾಡಿತ್ತು. ಗಂಡಿಗುಡೆಂ ಮತ್ತು ಗಡ್ಡಿ ಪೋತರಂ ಪೆದ್ದ ಚೆರುವಿನಲ್ಲಿ ಭಾರಿ ಪ್ರಮಾಣದಲ್ಲಿ ಕ್ಲೋರೋಮಿಥೈನ್ ರೀತಿಯ ರಾಸಾಯನಿಕ ತ್ಯಾಜ್ಯ ಬಿಡುಗಡೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕೂಡ ದೊಡ್ಡ ದೊಡ್ಡ ವರದಿಗಳು ಪ್ರಕಟ ಆಗಿದ್ದವು.
ಇವುಗಳ ಸ್ಥಿತಿ ಸುಧಾರಣೆಗೆ ನಿಲುಕಲಾರದಂತೆ ಇದೆ ಎಂದು ಕ್ಷೇತ್ರ ಮಟ್ಟದಲ್ಲಿ ನಡೆದಿರುವ ವಿಶ್ಲೇಷಣೆಗಳು ತಿಳಿಸಿವೆ. ಇದು ಯಾವುದೇ ಒಂದು ಪ್ರದೇಶಕ್ಕೆ ಅಥವಾ ಕೆಲವೇ ರಾಜ್ಯಗಳಿಗೆ ಸೀಮಿತವಾದ ಸಮಸ್ಯೆ ಅಲ್ಲ. ದೇಶದಲ್ಲಿ ಶೇ.80 ರಷ್ಟು ಮೇಲ್ಮೈ ನೀರು ಕಲುಷಿತಗೊಂಡಿದೆ ಎಂದು 'ವಾಟರ್ ಏಡ್' ಸಂಸ್ಥೆಯ ಅಧ್ಯಯನ ವರದಿ ಹೇಳುತ್ತದೆ. ಇದು ಪರಿಸ್ಥಿತಿಯ ತೀವ್ರತೆ ಎಷ್ಟು ಎಂಬುದನ್ನು ಬಿಚ್ಚಿಡುತ್ತದೆ.
ಅರವತ್ತರ ದಶಕದಲ್ಲಿ ಬೆಂಗಳೂರು ನಗರ 260ಕ್ಕೂ ಹೆಚ್ಚು ಕೆರೆಗಳಿಂದ ಕಂಗೊಳಿಸುತ್ತಿತ್ತು. ಈಗ ಕೇವಲ ಹತ್ತು ಕೆರೆಗಳು ಮಾತ್ರ ಉಳಿದುಕೊಂಡಿವೆ! ಎರಡು ದಶಕಗಳ ಹಿಂದೆ 137 ಕೆರೆಗಳಿಂದ ರಾರಾಜಿಸುತ್ತಿದ್ದ ಅಹಮದಾಬಾದ್ ನಗರ ಅತಿಕ್ರಮಣ ಮತ್ತು ಅಕ್ರಮ ನಿರ್ಮಿತಿಗಳಿಂದಾಗಿ 2012ರ ಹೊತ್ತಿಗೆ ತನ್ನ ಅರ್ಧದಷ್ಟು ಕೆರೆಗಳನ್ನು ಕಳೆದುಕೊಂಡಿದೆ. ಕಳೆದ ಹನ್ನೆರಡು ವರ್ಷಗಳಲ್ಲಿ, ನಗರದ 3200 ಹೆಕ್ಟೇರ್ ಪ್ರದೇಶದ ನೀರಿನ ಮೂಲಗಳು ಕಣ್ಮರೆ ಆಗಿವೆ ಎಂದು ಅಂದಾಜು ಮಾಡಲಾಗಿದೆ.
ಕಳೆದ ಆರು ದಶಕಗಳಲ್ಲಿ, ಬಿಹಾರದ ಪಾಟ್ನಾ ಜಿಲ್ಲೆಯ ಸುಮಾರು 800 ಕೊಳಗಳು ಮತ್ತು ಕೆರೆಗಳನ್ನು ಅತಿಕ್ರಮಣ ಮಾಡಲಾಗಿದೆ. ' ಜಲಸಿರಿ ' ಎಂಬ ಅಡ್ಡಹೆಸರಿನ ಕೇರಳದ ಶೇ 73 ರಷ್ಟು ಜಲಮೂಲಗಳು ಕಲುಷಿತಗೊಂಡಿವೆ ಎಂದು ಅಂಕಿ- ಅಂಶಗಳಿಂದ ತಿಳಿದುಬಂದಿದೆ. ಒಂದೆಡೆ ಜಲಮೂಲಗಳ ವಿಸ್ತೀರ್ಣ ಕುಗ್ಗುತ್ತಿದ್ದರೆ ಮತ್ತೊಂದೆಡೆ ರಾಸಾಯನಿಕಗಳು ಮತ್ತು ಕೈಗಾರಿಕೆಗಳು ಬಿಡುಗಡೆ ಮಾಡುವ ಅಪಾಯಕಾರಿ ತ್ಯಾಜ್ಯ, ಇವುಗಳ ಕೊರಳು ಹಿಂಡುತ್ತಿವೆ. ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ರಾಮಚಂದ್ರ ಪ್ರಭುಪಾದ ಸೇರಿದಂತೆ ವಿವಿಧ ವಿಜ್ಞಾನಿಗಳು ನೀಡಿರುವ ಎಚ್ಚರಿಕೆಯನ್ನು ಕಡೆಗಣಿಸಿದರೆ ದೇಶ ಈಗಾಗಲೇ ಸೀಮಿತ ನೆಲೆಯಲ್ಲಿ ಇರುವ ನೀರಿನ ಸಂಪನ್ಮೂಲಗಳನ್ನು ಕೂಡ ಕಳೆದುಕೊಳ್ಳುತ್ತದೆ.
ಹೀಗಾಗಿ ಸರ್ಕಾರಗಳು ಈ ಎಚ್ಚರದ ಮಾತುಗಳನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ದೇಶದಲ್ಲಿ ಈಗಾಗಲೇ 60 ಕೋಟಿಗೂ ಹೆಚ್ಚು ಜನರು ತೀವ್ರ ನೀರಿನ ಕೊರತೆ ಎದುರಿಸುತ್ತಿದ್ದಾರೆ ಎಂದು ' ನೀತಿ ಆಯೋಗ ' ಘೋಷಣೆ ಮಾಡಿದೆ. ಮುಕ್ಕಾಲು ಭಾಗದಷ್ಟು ನೀರು ಕಲುಷಿತಗೊಳ್ಳುವುದರಿಂದ ಪ್ರತಿವರ್ಷ ಎರಡು ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ವಿಜ್ಞಾನದಿಂದ ಮಾಡಬಹುದಾದ ಅನೇಕ ಪವಾಡಗಳಿವೆ, ಆದರೆ ನೀರನ್ನು ಸೃಷ್ಟಿ ಮಾಡಲು ಮನುಷ್ಯನಿಗೆ ಸಾಧ್ಯ ಇಲ್ಲ.
ಪ್ರಕೃತಿ ಧಾರೆ ಎರೆಯುವ ಪ್ರತಿ ನೀರಿನ ಹನಿಯನ್ನೂ ಸೂಕ್ತ ರೀತಿಯಲ್ಲಿ ಬಳಕೆ ಮಾಡಬೇಕಾದ ಹೊತ್ತು ಇದು. ಇಂತಹ ಸಮಯದಲ್ಲಿ ಸೀಮಿತ ನೀರಿನ ಸಂಪನ್ಮೂಲಗಳನ್ನು ನಾಶ ಮಾಡುವುದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಿಂತಲೂ ಕಡಿಮೆ ಕೃತ್ಯ ಅಲ್ಲ ! ಹೀಗೆ ಪ್ರಮುಖ ಜಲಮೂಲವನ್ನು ಕಲುಷಿತ ಮಾಡುವುದು ಗಂಭೀರ ಅಪರಾಧ ಆಗಿದ್ದು ಗರಿಷ್ಠ ಶಿಕ್ಷೆಗೆ ಅರ್ಹವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗ ಇರುವ ಕಾನೂನುಗಳಿಗೆ ಮಾರ್ಪಾಡು ತಂದು ನೀರಿನ ನಿರ್ವಹಣೆಯ ಉತ್ತಮ ಮಾನದಂಡಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿ ಆದಾಗ ಮಾತ್ರ ಜನರ ಬದುಕುವ ಹಕ್ಕು ಸುರಕ್ಷಿತವಾಗಿ ಇರುತ್ತದೆ.