ಶ್ರೀನಗರ/ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಎರಡನೇ ಹಂತದ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯಲ್ಲಿ 321 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸುಮಾರು 2,100ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಮತದಾನ ನಡೆಯುತ್ತಿದೆ ಎಂದು ರಾಜ್ಯ ಚುನಾವಣಾ ಆಯುಕ್ತ (ಎಸ್‌ಇಸಿ) ಕೆ.ಕೆ. ಶರ್ಮಾ ತಿಳಿಸಿದ್ದಾರೆ.
ಎರಡನೇ ಹಂತದ ಮತದಾನದಲ್ಲಿ 43 ಕ್ಷೇತ್ರಗಳ ಮತದಾನ ಕೇಂದ್ರಾಡಳಿತ ಪ್ರದೇಶದಲ್ಲಿ, ಕಾಶ್ಮೀರದಲ್ಲಿ 25 ಮತ್ತು ಜಮ್ಮುವಿನಲ್ಲಿ 18 ಕ್ಷೇತ್ರಗಳಿಗೆ ವೋಟಿಂಗ್ ನಡೆಯಲಿದೆ ಎಂದು ಎಸ್‌ಇಸಿ ತಿಳಿಸಿದೆ. ಡಿಡಿಸಿ ಚುನಾವಣೆಯೊಂದಿಗೆ ಏಕಕಾಲದಲ್ಲಿ 83 ಕ್ಷೇತ್ರಗಳಲ್ಲಿ ಸರ್ಪಂಚ್ ಚುನಾವಣೆ ನಡೆಸಲಾಗುವುದು ಮತ್ತು ಎರಡನೇ ಹಂತದಲ್ಲಿ ಒಟ್ಟು 223 ಅಭ್ಯರ್ಥಿಗಳು ಸರ್ಪಂಚ್ ಚುನಾವಣೆಗೆ ಕಣದಲ್ಲಿದ್ದಾರೆ ಎಂದು ಎಸ್‌ಇಸಿ ತಿಳಿಸಿದೆ.
ಅದೇ ರೀತಿ 331 ಕ್ಷೇತ್ರಗಳಲ್ಲಿ ಪಂಚ ಉಪಚುನಾವಣೆ ನಡೆಯಲಿದ್ದು, ಒಟ್ಟು 709 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದರು. 58 ಸರ್ಪಂಚ್‌ಗಳು (29 ಪುರುಷರು ಮತ್ತು 29 ಮಹಿಳೆಯರು) ಮತ್ತು 804 ಪಂಚರು (548 ಪುರುಷರು ಮತ್ತು 256 ಮಹಿಳೆಯರು) ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
2ನೇ ಹಂತದ ಚುನಾವಣೆಯ 2100 ಮತಗಟ್ಟೆಗಳಲ್ಲಿ ಒಟ್ಟು 7.90 ಲಕ್ಷ ಮತದಾರರು ಅರ್ಹರಾಗಿದ್ದಾರೆ. ಅದಕ್ಕಾಗಿ ಕಾಶ್ಮೀರದಲ್ಲಿ 1,305 ಮತಗಟ್ಟೆಗಳು ಮತ್ತು ಜಮ್ಮುವಿನಲ್ಲಿ 837 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಕಾಶ್ಮೀರದ ಬಹುತೇಕ ಎಲ್ಲಾ ವೋಟಿಂಗ್ ಬೂತ್‌ಗಳು ಭದ್ರತಾ ದೃಷ್ಟಿಯಿಂದ ಸೂಕ್ಷ್ಮವಾಗಿವೆ. ಕಣಿವೆಯ ಮತಗಟ್ಟೆಗಳಲ್ಲಿ ಹೆಚ್ಚುವರಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ಕೆ.ಕೆ. ಶರ್ಮಾ ಹೇಳಿದರು.
ಇದೇ ವೇಳೆ ಕೊರೊನಾ ಹಿನ್ನೆಲೆ ಮತದಾರರು ಮಾಸ್ಕ್ ಧರಿಸಿ ಮತಕೇಂದ್ರಕ್ಕೆ ಬರುವಂತೆ ಅವರು ಮನವಿ ಮಾಡಿದರು. ಹಾಗೆ ಅರ್ಹ ಮತದಾರರರೆಲ್ಲರೂ ಬಂದು ಮತದಾನ ಮಾಡುವಂತೆ ಕೋರಿದರು. ಮತದಾರರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ರು.