ಅಹಮದಾಬಾದ್ (ಗುಜರಾತ್): ಭಾರತ್ ಬಯೋಟೆಕ್‌ನ ಕೋವಿಡ್ ಲಸಿಕೆ ಪ್ರಯೋಗ ನಡೆಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಾಗಿರುವಾಗಲೇ, ಭಾರತದ ಇನ್ನೊಂದು ಕಂಪನಿ ಮಾನವನ ಮೇಲಿನ ಚಿಕಿತ್ಸಾ ಪ್ರಯೋಗಕ್ಕೆ ಸಿದ್ಧವಾಗಿದೆ. ಅಹ್ಮದಾಬಾದ್ನ ಝೈಡಸ್ ಕ್ಯಾಡಿಲಾ ಹೆಲ್ತ್ಕೇರ್ ಲಿಮಿಟೆಡ್ ಕಂಡು ಹಿಡಿದಿರುವ ಕೋವಿಡ್ ಲಸಿಕೆಯನ್ನ ಮನುಷ್ಯರ ಮೇಲೆ ಪ್ರಯೋಗಿಸಲು DCGI (Drugs Controller General of India)ಅನುಮೋದನೆ ನೀಡಿದೆ.
ಲಸಿಕೆಯ ಒಂದು ಮತ್ತು ಎರಡನೇ ಹಂತದ ಮಾನವನ ಮೇಲಿನ ಪ್ರಯೋಗಗಳಿಗೆ DCGI ಡಾ.ವಿ.ಜಿ.ಸೋಮಾನಿ ಅನುಮೋದನೆ ನೀಡಿದ್ದಾರೆ. ಮೂಲಗಳ ಪ್ರಕಾರ, ಈ ಕ್ಲಿನಿಕಲ್ ಪ್ರಯೋಗವು ಪೂರ್ಣಗೊಳ್ಳಲು ಸುಮಾರು 3 ತಿಂಗಳು ತೆಗೆದುಕೊಳ್ಳಬಹುದು. ಪ್ರಾಣಿಗಳ ಮೇಲೆ ಈ ಲಸಿಕೆಯ ಪ್ರಯೋಗಗಳು ಯಶಸ್ವಿಯಾಗಿವೆ ಎಂದು ಕಂಪನಿ ಹೇಳಿಕೊಂಡಿದೆ. ಈ ಆಧಾರದ ಮೇಲೆ ಮಾನವನ ಮೇಲೆ ಈ ಲಸಿಕೆಯನ್ನ ಪ್ರಯೋಗಿಸಲು ಅವಕಾಶ ನೀಡಲಾಗಿದೆ.
ಮಾನವನ ಮೇಲಿನ ಲಸಿಕೆಯ ಪ್ರಯೋಗಕ್ಕಾಗಿ ಕಂಪನಿಯು ಶೀಘ್ರದಲ್ಲೇ ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸಲಿದೆ ಎನ್ನಲಾಗಿದೆ. ದೇಶದಲ್ಲಿ ಕೊರೊನಾ ಬಿಕ್ಕಟ್ಟು ವ್ಯಾಪಕವಾಗಿ ಉಲ್ಭಣಿಸಿದ ಪರಿಣಾಮ ಸರ್ಕಾರ ಶೀಘ್ರ ಈ ನಿರ್ಧಾರ ಕೈಗೊಂಡಿದೆ. ಈ ಮೊದಲು ಭಾರತದ ಮೊದಲ ಕೋವಿಡ್ -19 ಲಸಿಕೆ ಕೋ ವ್ಯಾಕ್ಸಿನ್ ಅನ್ನು ಇಂಡಿಕನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 19,148 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 6,04,641 ಕ್ಕೆ ಏರಿದೆ. ಈವರೆಗೆ ಸಾವಿನ ಸಂಖ್ಯೆ 17,834 ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.