ಮುಂಬೈ(ಮಹಾರಾಷ್ಟ್ರ) : ಕೊರೊನಾ ವೈರಸ್ ಮಧ್ಯೆ ಬೇರೆ ರಾಜ್ಯಗಳಂತೆ ಮಹಾರಾಷ್ಟ್ರ ಸರ್ಕಾರವೂ ರಾಜ್ಯದ ಪ್ರಮುಖ ಆದಾಯದ ಮೂಲ ಮದ್ಯ ಮಾರಾಟಕ್ಕೆ ಆನ್‌ಲೈನ್ ಮೂಲಕ ಅವಕಾಶ ನೀಡಿದೆ. ಆದರೆ, ಹೋಂ ಡೆಲಿವರಿ ಹೆಸರಿನಲ್ಲಿ ಸೈಬರ್ ವಂಚಕರು ಮದ್ಯಪ್ರಿಯರನ್ನ ಮೋಸಗೊಳಿಸಿದ ಹಲವಾರು ಪ್ರಕರಣ ಕಂಡು ಬಂದಿವೆ.
ಈ ಸೈಬರ್ ವಂಚಕರು ನಗರದಾದ್ಯಂತ ಕೆಲವು ಉತ್ತಮ ವೈನ್ ಅಂಗಡಿಗಳ ಹೆಸರಿನಲ್ಲಿ ವಾಟ್ಸ್ಆ್ಯಪ್ ಸೇರಿ ವಿವಿಧ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮೊಬೈಲ್ ಸಂಖ್ಯೆ ಅಪ್‌ಲೋಡ್ ಮಾಡುತ್ತಿದ್ದು, ಗ್ರಾಹಕರು ಆರ್ಡರ್ ಮಾಡಿದ ನಂತರ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮುಂತಾದ ಅಪ್ಲಿಕೇಶನ್‌ಗಳ ಮೂಲಕ ಆನ್‌ಲೈನ್ ಪಾವತಿ ಮಾಡಲು ಅವರನ್ನು ಕೇಳುತ್ತಾರೆ. ಪಾವತಿ ಮಾಡಿದ ನಂತರ ವಂಚಕರು ತಕ್ಷಣ ತಮ್ಮ ಫೋನ್ ನಂಬರ್ನ ಬದಲಾಯಿಸುತ್ತಾರೆ ಹಾಗೂ ಅಲ್ಲಿಂದ ಕಣ್ಮರೆಯಾಗುತ್ತಾರೆ. ಈ ರೀತಿಯಾಗಿ ಗ್ರಾಹಕರನ್ನು ನಿರಂತರವಾಗಿ ಮೋಸಗೊಳಿಸಲಾಗುತ್ತಿದೆ.
ಹೆಚ್ಚುತ್ತಿರುವ ಇಂತಹ ಸೈಬರ್ ವಂಚನೆ ಪ್ರಕರಣಗಳ ಕುರಿತು ಫೋರ್ಟ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಪಟೇಲ್ ಅಪರಿಚಿತ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರಾಜ್ಯದ ಅಬಕಾರಿ ಇಲಾಖೆ ಮತ್ತು ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.
ಸಾವಿರಾರು ರೂ. ವಂಚನೆಗೊಳಗಾದ ಹೆಚ್ಚಿನ ಗ್ರಾಹಕರು ದೂರು ನೀಡಲು ಮುಂದೆ ಬರುತ್ತಿಲ್ಲ. ಆದರೆ, ನಾನು ಈ ಬಗ್ಗೆ ದೂರನ್ನು ನೀಡಿದ್ದೇನೆ. ಆದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದ ಅವರು, ಅಂಗಡಿ ಮತ್ತು ಅದರ ಮಾಲೀಕರು ತಿಳಿದಿದ್ದರೆ ಮಾತ್ರ ಆನ್‌ಲೈನ್‌ನಲ್ಲಿ ಮದ್ಯ ಖರೀದಿಸಿ ಎಂದು ಮನವಿ ಮಾಡಿದರು.