ನವದೆಹಲಿ: ರೈಲ್ವೆ ನಿಲ್ದಾಣದಲ್ಲಿ 3.26 ಕೋಟಿ ರೂ.ಗಳ ಚಿನ್ನ ವಶಕ್ಕೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಕಸ್ಟಮ್ಸ್ ವಿಭಾಗದ ಉಪ ಆಯುಕ್ತರು ಮಾಹಿತಿ ನೀಡಿದ್ದಾರೆ.
ನವೆಂಬರ್ 19ರಂದು ನವದೆಹಲಿಯ ರೈಲ್ವೆ ನಿಲ್ದಾಣದಲ್ಲಿ ನಿಖರ ಮಾಹಿತಿ ಮೇರೆಗೆ ದಾಳಿ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು ಹೌರಾದಿಂದ ಬಂದಿದ್ದ ರಾಜಧಾನಿ ಎಕ್ಸ್ಪ್ರೆಸ್ನಲ್ಲಿ ಓರ್ವ ವ್ಯಕ್ತಿಯನ್ನು ತಡೆದು 3.26 ಕೋಟಿ ರೂಪಾಯಿ ಮೌಲ್ಯದ 6.3 ಕೆ.ಜಿ ಚಿನ್ನವನ್ನ ಜಪ್ತಿ ಮಾಡಿದ್ದರು.
ಜಪ್ತಿ ಮಾಡಿದ ಚಿನ್ನವು ಬಿಸ್ಕೆಟ್ ರೂಪದಲ್ಲಿದ್ದು, ಈ ಬಗ್ಗೆ ತನಿಖೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು ದೇಶದ ಈಶಾನ್ಯ ಗಡಿಯ ಮೂಲಕ ದೇಶದ ಒಳಗೆ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಕಸ್ಟಮ್ಸ್ ಕಾಯ್ದೆ-1962ರ ಅಡಿಯ ಅನ್ವಯ ದೂರು ದಾಖಲು ಮಾಡಿಕೊಳ್ಳಲಾಗಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.