ನವದೆಹಲಿ: ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಹಿಂದೆಂದಿಗಿಂತಲೂ ವಿಭಿನ್ನವಾಗಿರಲಿದೆ. ಅದಕ್ಕೆ ಕಾರಣ ಕೊರೊನಾ. ಈ ಸಾಂಕ್ರಾಮಿಕ ರೋಗದಿಂದಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿಯ ಕೆಂಪು ಕೋಟೆಯಲ್ಲಿ ದೇಶವು ಸಂಪೂರ್ಣವಾಗಿ ವಿಭಿನ್ನ ಸ್ವಾತಂತ್ರ್ಯ ದಿನಾಚರಣೆಗೆ ಸಾಕ್ಷಿಯಾಗಲಿದೆ.
ಈ ಹಿಂದಿನ ವರ್ಷಗಳ ಸ್ವಾತಂತ್ರ್ಯ ದಿನಾಚರಣೆಗೆ ಹೋಲಿಸಿದರೆ, ಈ ವರ್ಷ ಕೇವಲ ಶೇ.20 ಗಣ್ಯರು ಅಥವಾ ಇತರ ವ್ಯಕ್ತಿಗಳಿಗೆ ಕೆಂಪು ಕೋಟೆಯಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮ ಹಾಗೂ ಪ್ರಧಾನಿ ನರೇಂದ್ರ ಮೋದಿಯ ಭಾಷಣದ ನೇರ ವೀಕ್ಷಣೆಗೆ ಅವಕಾಶವಿದೆ.
ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಮತ್ತು ಭಾರತೀಯ ಪುರಾತತ್ವ ಇಲಾಖೆಯ ಮಹಾನಿರ್ದೇಶಕರು ಕಳೆದ ವಾರವಷ್ಟೇ ಕೆಂಪು ಕೋಟೆಗೆ ಭೇಟಿ ನೀಡಿ ಇಲ್ಲಿನ ಸಿದ್ಧತೆಗಳ ಪರಿಶೀಲನೆ ನಡೆಸಿದ್ದಾರೆ. ಸಾಮಾಜಿಕ ಅಂತರವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ವ್ಯವಸ್ಥೆಗಳನ್ನು ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅಜಯ್ ಕುಮಾರ್ ಸೂಚನೆ ನೀಡಿದ್ದಾರೆ. ಮೂಲಗಳ ಪ್ರಕಾರ, ಈ ಬಾರಿ ಯಾವುದೇ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ. ಬದಲಾಗಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ನ ಕೆಡೆಟ್‌ಗಳು ಕೆಂಪು ಕೋಟೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅದೇ ರೀತಿ ಈ ಹಿಂದೆ ಇದ್ದಂತೆ, ವಿವಿಐಪಿಗಳು ಪ್ರಧಾನಿ ಭಾಷಣ ಮಾಡುವ ರಾಂಪಾರ್ಟ್ ಪಕ್ಕದಲ್ಲಿ ಕುಳಿತುಕೊಳ್ಳಲು ಅವಕಾಶವಿಲ್ಲ. ಈ ಹಿಂದೆ ವೇದಿಕೆಯ ಎರಡೂ ಬದಿಗಳಲ್ಲಿ ಕುಳಿತುಕೊಳ್ಳುತ್ತಿದ್ದ 900 ವಿವಿಐಪಿಗಳು, ಈ ಬಾರಿ ತಳಮಟ್ಟದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಅದು ಕೂಡಾ ಕೇವಲ ನೂರರೊಳಗಿನ ಸಂಖ್ಯೆಯ ಗಣ್ಯರು ಮಾತ್ರ.
ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಪ್ರಮುಖ ಆಕರ್ಷಣೆಯೆಂದರೆ, ಕೊರೊನಾದಿಂದ ಚೇತರಿಸಿಕೊಂಡ 1,500 ಜನ, ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರಲ್ಲಿ 500 ಸ್ಥಳೀಯ ಪೊಲೀಸ್ ಸಿಬ್ಬಂದಿ ಆಗಿದ್ದು, ಉಳಿದ 1,000 ಜನರನ್ನು ದೇಶದ ವಿವಿಧ ಭಾಗಗಳಿಂದ ಕರೆಸಲಾಗುತ್ತದೆ.
ಕಳೆದ ವರ್ಷದವರೆಗೂ, ಪ್ರಧಾನ ಮಂತ್ರಿಯ ಭಾಷಣವನ್ನು ವೀಕ್ಷಿಸಲು ಕನಿಷ್ಠ 10,000 ಜನರು ಈ ಸಮಾರಂಭದಲ್ಲಿ ಭಾಗವಹಿಸುತ್ತಿದ್ದರು. ಆದರೆ ಇತ್ತೀಚೆಗೆ ಈ ಕುರಿತು ನಡೆದ ಸಭೆಯಲ್ಲಿ, ರಕ್ಷಣಾ ಸಚಿವಾಲಯವು ಸಾರ್ವಜನಿಕರ ಬದಲು ಕೊರೊನಾದಿಂದ ಗುಣಮುಖರಾದವರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಮುಂದಾಗಿದ್ದಾರೆ. ಇದರ ಪ್ರಕಾರ ನಡೆದುಕೊಳ್ಳಲು ಗೃಹ ಸಚಿವಾಲಯಕ್ಕೆ ತಿಳಿಸಲಾಗಿದೆ. ಒಟ್ಟಾರೆ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಕೂಡ ಕೊರೊನಾದಿಂದಾಗಿ ಭಿನ್ನವಾಗಿರಲಿದೆ.