ಧರ್ಮಶಾಲಾ: ಸಾಂಕ್ರಾಮಿಕ ರೋಗ ಕೋವಿಡ್-19ರ ವಿರುದ್ಧ ನಡೆಯುತ್ತಿರುವ ಜಾಗತಿಕ ಹೋರಾಟವನ್ನು ಸಾಮಾಜಿಕ ಜವಾಬ್ದಾರಿಯ ಪಾಠಕ್ಕೆ ಹೋಲಿಸಿರುವ ಬೌದ್ಧ ಧಾರ್ಮಿಕ ಗುರು ದಲೈಲಾಮ ಅವರು, ಸದ್ಯದ ಸಂದರ್ಭದಲ್ಲಿ ಭೂಮಿ ಮತ್ತು ಸುಸ್ಥಿರ ಅಭಿವೃದ್ಧಿಯ ಮಹತ್ವ ಅರಿಯುವ ಅಗತ್ಯ ಇದೆ ಎಂದು ತಿಳಿಸಿದ್ದಾರೆ.
ಭೂ ದಿನದ ಈ 50ನೇ ವಾರ್ಷಿಕೋತ್ಸವ ನಿಮಿತ್ತ ಮಾತನಾಡಿರುವ ಅವರು, ಜನರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಮ್ಮ ಗ್ರಹ (ಭೂಮಿ) ದೊಡ್ಡ ಮಟ್ಟದ ಸವಾಲುಗಳನ್ನು ಎದುರಿಸುತ್ತಿದೆ. ಹೀಗಾಗಿ ಭೂಮಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಲೇಬೇಕು ಎಂದು ಹೇಳಿದ್ದಾರೆ.
ಜಾಗತಿಕ ಪಿಡುಗಿನಿಂದಾಗಿ ಮಾನವನಿಗೆ ಸಾರ್ವತ್ರಿಕ ಜವಾಬ್ದಾರಿಯ ನಿಜವಾದ ಏನೂ ಎಂಬುದು ತಿಳಿಯಲಿದೆ. ಇದರಿಂದಾಗಿ ತಮ್ಮ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡಬೇಕೆಂಬ ಆಸೆ ಮತ್ತೊಬ್ಬನಲ್ಲಿ ಚಿಗುರು ಹೊಡೆಯುತ್ತದೆ. ಈ ಗುಣ ಎಲ್ಲರಲ್ಲಿ ಮನಃ ಪರಿವರ್ತನೆ ಮಾಡಲಿದೆ ಎಂದು ಅಭಿಪ್ರಾಯಪಟ್ಟರು.
ಜಗತ್ತನ್ನೇ ವ್ಯಾಪಿಸಿರುವ ಸಾಂಕ್ರಾಮಿಕ ರೋಗ ಕೊರೊನಾ ವೈರಸ್, ಯಾವುದೇ ಜನಾಂಗ, ಸಂಸ್ಕೃತಿ, ಗಂಡು-ಹೆಣ್ಣು ಎಂಬ ತಾರತಮ್ಯವಿಲ್ಲದೇ ಎಲ್ಲರನ್ನೂ ಬೆದರಿಸುತ್ತಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮಾನವೀಯತೆ ತೋರಬೇಕು. ಅಸಹ್ಯಪಡಬಾರದು ಎಂದರು.
ಈ ಭೂಮಿಯಲ್ಲಿ ನಾವು ಒಂದು ದೊಡ್ಡ ಕುಟುಂಬದ ಭಾಗವಾಗಿ ಜನಿಸಿದ್ದೇವೆ. ಶ್ರೀಮಂತ, ಬಡವ, ವಿದ್ಯಾವಂತ ಅಥವಾ ಅಶಿಕ್ಷಿತರಾಗಿರಬಹುದು. ಒಂದು ರಾಷ್ಟ್ರ ಅಥವಾ ಇನ್ನೊಂದು ರಾಷ್ಟ್ರಕ್ಕೆ ಸೇರಿದವರಾಗಿರಬಹುದು. ಅಂತಿಮವಾಗಿ ಎಲ್ಲರೂ ಮನುಷ್ಯರೇ ಎಂದು ಹೇಳಿದರು.