ಹೈದರಾಬಾದ್: ವಿಶ್ವಾದ್ಯಂತ ಕೊರೊನಾ ವೈರಸ್ ಹಾವಳಿ ಹೆಚ್ಚುತ್ತಲೆ ಇರುವ ಈ ಸಂದರ್ಭದಲ್ಲಿ ಕೋವಿಡ್ 19 ನಮ್ಮ ದೇಹದ ಜೀವಕೋಶಗಳಿಗೆ ಸೋಂಕು ಉಂಟು ಮಾಡುವುದನ್ನು ತಪ್ಪಿಸುವ ಪ್ರತಿಕಾಯವನ್ನು ನೆದರ್ಲ್ಯಾಂಡ್ನ ಉಟ್ರೆಚ್‍ಟ್ ವಿಶ್ವವಿದ್ಯಾನಿಲಯ, ಎರಾಸ್ಮಸ್ ವೈದ್ಯಕೀಯ ಕೇಂದ್ರ ಹಾಗೂ ಹಾರ್ಬರ್ ಬಯೋಮೆಡ್ (ಹೆಚ್‍ಬಿಎಂ)ದ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ಪೂರ್ಣ ಮಾನವ ಪ್ರತಿಕಾಯಗಳು ಸಾಂಪ್ರದಾಯಿಕ ಚಿಕಿತ್ಸಾ ಪ್ರತಿಕಾಯಗಳಿಗಿಂತ ತುಂಬಾ ವಿಭಿನ್ನವಾಗಿರುತ್ತದೆ. ಈ ಪ್ರತಿಕಾಯಗಳು ಬೇರೆ ಜೀವಿಗಳ ದೇಹದಲ್ಲಿ ಬೆಳವಣಿಗೆಗೊಂಡು, ಮಾನವನಲ್ಲಿ ಬಳಕೆಗೆ ಸಿದ್ಧವಾಗಿರುತ್ತದೆ. ಇದನ್ನು ಬಳಸಿಕೊಂಡು ಶ್ವಾಸಕೋಶಗಳಿಗೆ ಸೋಂಕು ಹರಡುವುದನ್ನು ತಪ್ಪಿಸಲು ಹಾಗೂ ಸೋಂಕಿಗೆ ಚಿಕಿತ್ಸೆ ನೀಡಲು ಬಳಸುವ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸುವ ಚಿಂತನೆ ನಡೆಸಲಾಗುತ್ತಿದೆ. ಈ ಪತ್ತೆ, ಸದ್ಯ ನಡೆಯುತ್ತಿರುವ ಸಂಶೋಧನೆಯ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ. ಉಟ್ರೆಚ್‍ಟ್ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಹಾಗೂ ಸಂಶೋಧನಾ ಮುಖ್ಯಸ್ಥ ಡಾ.ಬ್ರೆರೆಂಡ್ ಜನ್ ಬೋಶ್ ಪ್ರಕಾರ ಈ ಸಂಶೋಧನಾ ತಂಡ ಈ ಹಿಂದೆ 2002-03ರಲ್ಲಿ ಸಾರ್ಸ್-ಸಿಒವಿ ವೈರಸ್ ವಿರುದ್ಧ ಪ್ರತಿಕಾಯಗಳ ಸಂಶೋಧನೆಯಲ್ಲಿ ತೊಡಗಿತ್ತು. "ಈ ಸಾರ್ಸ್ -ಸಿಒವಿ ಪ್ರತಿಕಾಯಗಳ ಸಂಗ್ರಹಣೆಯನ್ನು ಬಳಸಿಕೊಂಡು, ನಾವು ಕೋವಿಡ್-19ನ್ನು ಜೀವಕೋಶಗಳಲ್ಲಿ ನಿಷ್ಕ್ರಿಯಗೊಳಿಸಬಲ್ಲ ಪ್ರತಿಕಾಯಗಳನ್ನು ಗುರುತಿಸಿದೆವು." ಹೀಗೆ ವೈರಸ್‍ನ್ನು ನಿಷ್ಕ್ರಿಯಗೊಳಿಸಬಲ್ಲ ಪ್ರತಿಕಾಯ, ಸೋಂಕು ಹಬ್ಬುವ ವಿಧಾನವನ್ನೇ ಬದಲಾಯಿಸುವ ಸಾಧ್ಯತೆ ಇದೆ. ಜತೆಗೆ, ಈ ಸೋಂಕಿನ ಮೂಲ ಬದಲಾವಣೆ, ವೈರಸ್ ನಾಶ, ಹಾಗೂ ಈ ವೈರಸ್‍ಗೆ ತೆರೆದುಕೊಂಡ ವ್ಯಕ್ತಿಗೆ ಆ ವೈರಸ್‍ನಿಂದ ರಕ್ಷಣೆ ಕೊಡುವ ಶಕ್ತಿ ಹೊಂದಿವೆ," ಎಂದು ಅವರು ತಿಳಿಸಿದ್ದಾರೆ.
ಡಾ. ಬೋಶ್ ಪ್ರಕಾರ, ಸಾರ್ಸ್-ಸಿಒವಿ, ಹಾಗೂ ಸಾರ್ಸ್-ಸಿಒವಿ-2 ಎರಡೂ ವೈರಸ್‍ಗಳೆರಡಕ್ಕೂ ಸಂಬಂಧಪಟ್ಟ ಪ್ರತಿಕಾಯ ಇದಾಗಿದೆ. ಈ ಎರಡೂ ವೈರಸ್‍ಗಳನ್ನು ಕೊಲ್ಲಬಲ್ಲ ಸಾಮರ್ಥ್ಯ ಈ ಪ್ರತಿಕಾಯಕ್ಕಿದೆ. "ಹೀಗೆ, ಈ ಪ್ರತಿಕಾಯದ ಅಡ್ಡ ತಟಸ್ಥಗೊಳಿಸುವಿಕೆಯ ಲಕ್ಷಣ ಉತ್ತೇಜಕವಾಗಿದ್ದು, ಇವೆಲ್ಲದರ ಜೊತೆಗೆ ಕೊರೊನಾ ಕುಟುಂಬದಿಂದ ಭವಿಷ್ಯದಲ್ಲಿ ಹರಡಬಹುದಾದ ವೈರಸ್‍ಗಳನ್ನು ಕೂಡಾ ತಟಸ್ಥಗೊಳಿಸುವ ಸಾಮರ್ಥ್ಯವನ್ನು ಈ ಪ್ರತಿಕಾಯ ಹೊಂದಿದೆ," ಎಂದು ಅವರು ತಿಳಿಸಿದರು. ಹಾರ್ಬರ್ ಬಯೋಮೆಡ್ (ಹೆಚ್‍ಬಿಎಂ) ಸ್ಥಾಪಕ ಮುಖ್ಯ ವೈಜ್ಞಾನಿಕ ಅಧಿಕಾರಿ ಫ್ರಾಂಕ್ ಗ್ರಾಸ್‍ವೆಲ್ಡ್, ಈ ಸಂಶೋಧನೆಯ ಸಹ ಮುಖ್ಯಸ್ಥರಾಗಿದ್ದು, ಅವರು ಎರಾಸ್ಮಸ್ ವೈದ್ಯಕೀಯ ಕೇಂದ್ರದಲ್ಲಿ ಜೀವಕೋಶಗಳ ಜೀವಶಾಸ್ತ್ರದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇವರ ಪ್ರಕಾರ ಈ ಸಂಶೋಧನೆ ಮುಂದಿನ ಹಂತದ ಸಂಶೋಧನೆಗೆ ಬಹುಮುಖ್ಯವಾದ ತಳಪಾಯ ಹಾಕಿದ್ದು, ಈ ಪ್ರತಿಕಾಯದ ಅಭಿವೃದ್ಧಿ, ಸುಧಾರಣೆ ನಿಟ್ಟಿನಲ್ಲಿ ಇದು ನಾಂದಿ ಹಾಡಿದೆ. ಇದು ಕೋವಿಡ್-19ಕ್ಕೆ ಸೂಕ್ತವಾದ ಚಿಕಿತ್ಸೆ ಅಭಿವೃದ್ಧಿಗೆ ಮುನ್ನುಡಿ ಹಾಡಿದೆ ಎಂದಿದ್ದಾರೆ.
ಈ ಸಂಶೋಧನೆಯಲ್ಲಿ ಬಳಕೆಯಾಗಿರುವ ಪ್ರತಿಕಾಯ ಸಂಪೂರ್ಣ ಮಾನವ ದೇಹದ್ದಾಗಿದೆ. ಹೀಗಾಗಿ ಇದು ಅಡ್ಡ ಪರಿಣಾಮಗಳಿದ್ದ ಚಿಕಿತ್ಸೆಯ ತ್ವರಿತ ಗತಿಯ ಪತ್ತೆಗೆ ಸಹಕಾರಿ ಎನ್ನುತ್ತಾರೆ ಗ್ರಾಸ್‍ವೆಲ್ಡ್.
ಹೆಚ್‍ಬಿಎಂನ ಸಂಸ್ಥಾಪಕ, ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಜಿಂಗ್‍ಸಾಂಗ್ ವಾಂಗ್ ಪ್ರಕಾರ, ಇದು ಅತ್ಯಂತ ಕ್ರಾಂತಿಕಾರಿ ಸಂಶೋಧನೆಯಾಗಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದ್ದು, ಆ ಮೂಲಕವಷ್ಟೇ ಈ ಪ್ರತಿಕಾಯ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಯುತ್ತದೆಯೇ ಅಥವಾ ಮನುಷ್ಯರನ್ನು ಅದರಿಂದ ರಕ್ಷಿಸುತ್ತದೆಯೆ ಎಂಬುದನ್ನು ಕಂಡು ಹಿಡಿಯಬೇಕಿದೆ. ಇಲ್ಲಿ ಉಲ್ಲೇಖನಾರ್ಹ ಸಂಗತಿಯೆಂದರೆ, ಈ ಸಂಶೋಧನೆ, ಕೋವಿಡ್-19 ವಿರುದ್ಧ ಪೂರ್ಣ ಮಾನವ ಪ್ರತಿಕಾಯದ ಅಭಿವೃದ್ಧಿ ನಿಟ್ಟಿನಲ್ಲಿ ಹೊಸ ಹೆಜ್ಜೆಯಾಗಿದ್ದು, ಆ ಮೂಲಕ ಕೋವಿಡ್-19ನಿಂದ ಮನುಕುಲವನ್ನು ರಕ್ಷಿಸಲು ಅಥವಾ ಸೋಂಕಿತ ರೋಗಿಯ ಚಿಕಿತ್ಸೆ ನಿಟ್ಟಿನಲ್ಲಿ ಆಶಾಕಿರಣವಾಗಿದೆ. ಈಗಾಗಲೇ ಸಾಂಕ್ರಾಮಿಕ ರೋಗ 3.5 ಮಿಲಿಯನ್‍ಗಿಂತಲೂ ಹೆಚ್ಚು ಜನರನ್ನು ಸೋಂಕಿತರನ್ನಾಗಿಸಿದ್ದು, 2.45 ಲಕ್ಷ ಜನ ವಿಶ್ವಾದ್ಯಂತ ಇದರಿಂದಾಗಿ ಸಾವನ್ನಪ್ಪಿದ್ದಾರೆ.