ಚೆನ್ನೈ: ಕೊರೊನಾ ವೈರಸ್‌ನಿಂದ ಮೃತಪಟ್ಟ 55 ವರ್ಷದ ವೈದ್ಯರ ಮೃತದೇಹವನ್ನು ಕಿಲ್‌ಪಾಕ್‌ನ ಸ್ಮಶಾನದಲ್ಲಿ ಭಾನುವಾರ ಸಮಾಧಿ ಮಾಡಿರುವುದಕ್ಕೆ ಚೆನ್ನೈನ ಅನ್ನಾ ನಗರ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಂತರ ಪೊಲೀಸ್ ಭದ್ರತೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ನರ ಶಸ್ತ್ರಚಿಕಿತ್ಸಕರಾಗಿದ್ದ ಮೃತ ವೈದ್ಯ, ಚೆನ್ನೈನ ಖಾಸಗಿ ಆಸ್ಪತ್ರೆಯ ಅಧ್ಯಕ್ಷರಾಗಿದ್ದರು. ಎರಡು ವಾರಗಳ ಕಾಲ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ವೈದ್ಯರು ಭಾನುವಾರ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದರು.
ಕೊರೊನಾಗೆ ಬಲಿಯಾದ ವೈದ್ಯರ ಶವವನ್ನು ಅಂತ್ಯಕ್ರಿಯೆಗೆ ತೆಗೆದುಕೊಂಡು ಹೋಗುವಾಗ ಜನರು ಆ್ಯಂಬುಲೆನ್ಸ್ ಮೇಲೆ ಕಲ್ಲು ಎಸೆಯಲು ಪ್ರಾರಂಭಿಸಿದರು. ಈ ವೇಳೆ ಚಾಲಕನಿಗೂ ಏಟು ಬಿದ್ದಿದೆ ಎಂದು ಆಸ್ಪತ್ರೆಯ ಉದ್ಯೋಗಿಯೊಬ್ಬರು ಮಾಹಿತಿ ನೀಡಿದ್ದಾರೆ.
ಘಟನೆ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಂತಿಮವಾಗಿ ವೈದ್ಯರ ಅಂತ್ಯ ಸಂಸ್ಕಾರವನ್ನು ಅದೇ ಸ್ಮಶಾನದಲ್ಲಿ ನೆರವೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆ್ಯಂಬುಲೆನ್ಸ್ಗೆ ಹಾನಿ ಮಾಡಿದ್ದಕ್ಕಾಗಿ ಸುಮಾರು 20 ಜನರನ್ನು ಬಂಧಿಸಲಾಗಿದೆ. ಚೆನ್ನೈನಲ್ಲಿ ವೈದ್ಯರನ್ನು ಸಮಾಧಿ ಮಾಡಲು ಅಡ್ಡಿ ಪಡಿಸಿದ ಎರಡನೇ ಘಟನೆ ಇದಾಗಿದೆ.