ತೆಂಕಸಿ (ತಮಿಳುನಾಡು): ಕೋವಿಡ್ ಪಾಸಿಟಿವ್ ರೋಗಿಯೊಬ್ಬ ಮೃತಪಟ್ಟ ಘಟನೆ ಜಿಲ್ಲೆಯ ಅಲ್ವಾರ್ಕುರಿಚಿಯಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡದೆ ಮನೆಗೆ ಕಳಿಸಿರುವುದೇ ಸಾವಿಗೆ ಕಾರಣ ಎಂದು ಮೃತನ ಸಂಬಧಿಕರು ಆರೋಪಿಸಿದ್ದಾರೆ.
ಮೃತ ವ್ಯಕ್ತಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಸೆಪ್ಟೆಂಬರ್ 3ರಂದು ತೆಂಕಸಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ಪರೀಕ್ಷಾ ವರದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಕೇವಲ ಮೂರು ದಿನಗಳ ಕಾಲ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು, ಸೆಪ್ಟೆಂಬರ್ 6ರಂದು ಅವರನ್ನು ಮನೆಗೆ ಕಳಿಸಿದ್ದರು. ಮನೆಗೆ ತಲುಪಿದ ನಂತರ ಮತ್ತೆ ಜ್ವರ ಉಲ್ಬಣಗೊಂಡಿತ್ತು. ಹೀಗಾಗಿ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ದಿನಕಳೆದಂತೆ ಆರೋಗ್ಯ ಸ್ಥಿತಿ ಗಂಭೀರವಾಗತೊಡಗಿತ್ತು. ಹೀಗಾಗಿ, ಸೆಪ್ಟೆಂಬರ್ 9ರಂದು ತಿರುನೆಲ್ವೆಲ್ಲಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಕೊರೊನಾ ಸೋಂಕು ಸಂಪೂರ್ಣವಾಗಿ ಗುಣವಾಗದಿದ್ದರೂ ಕೇವಲ ಮೂರು ದಿನ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿರುವುದೇ ಸಾವಿಗೆ ಕಾರಣ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ ಮತ್ತು ಮೂರು ದಿನ ಮಾತ್ರ ಯಾಕೆ ಚಿಕಿತ್ಸೆ ನೀಡಲಾಯಿತು ಎಂದು ಕಾರಣ ಕೇಳಿದ್ದಾರೆ. ಈ ನಡುವೆ ಸಾಮಾಜಿಕ ಕಾರ್ಯಕರ್ತ ಎಸ್.ಪಿ.ಮುತ್ತುರಾಮನ್ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದು, ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ ಮುತ್ತುರಾಮನ್, ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಮೃತ ವ್ಯಕ್ತಿಗೆ ನಿಜವಾಗಿಯೂ ಕೊರೊನಾ ಇತ್ತೋ ಇಲ್ಲವೋ ಎಂಬುವುದೇ ನಮಗೆ ಅನುಮಾನ ಎಂದಿದ್ದಾರೆ.