ಕೋವಿಡ್-19 ನಿಂದ ಬಳಲುತ್ತಿರುವ ರೋಗಿಗಳಿಗೆ ಆಕ್ಸಿಜನ್ ಸಂಜೀವಿನಿಯಾಗಿ ಕೆಲಸ ಮಾಡುತ್ತದೆ. ಕೋವಿಡ್ ಸೋಂಕಿತರ ಪ್ರಾಣ ಉಳಿಸಲು ಆಕ್ಸಿಜನ್ ಯಾವ ರೀತಿ ಸಹಾಯಕ ಹಾಗೂ ಭಾರತದ ಆಸ್ಪತ್ರೆಗಳು ಆಕ್ಸಿಜನ್ ಪೂರೈಸಲು ಎಷ್ಟು ಸುಸಜ್ಜಿತವಾಗಿವೆ ಎಂಬುದನ್ನು ಅರಿತುಕೊಳ್ಳುವುದು ಮುಖ್ಯ. ಅಗತ್ಯಕ್ಕೆ ತಕ್ಕಷ್ಟು ಆಕ್ಸಿಜನ್ ಸಿಲಿಂಡರ್ಗಳ ಲಭ್ಯತೆಯ ಬಗ್ಗೆ ಕೆಲ ಆಸ್ಪತ್ರೆಗಳು ಸಂಶಯ ವ್ಯಕ್ತಪಡಿಸುತ್ತಿವೆ.
ತೀರಾ ವೆಂಟಿಲೇಟರ್ ಅಳವಡಿಸುವ ಮಟ್ಟಕ್ಕೆ ಹೋಗದಿರುವಂತೆ ಅನೇಕ ವೇಳೆ ರೋಗಿಗಳಿಗೆ ಆಕ್ಸಿಜನ್ ಪೂರೈಸಲಾಗುತ್ತದೆ. ಅತಿ ಗಂಭೀರ ಸ್ವರೂಪದ ಕೋವಿಡ್ ಸೋಂಕಿನಿಂದ ಬಳಲುವ ಶೇ 15 ರಷ್ಟು ರೋಗಿಗಳಿಗೆ ಆಕ್ಸಿಜನ್ ನೀಡಬೇಕಾಗುತ್ತದೆ ಹಾಗೂ ಶೇ 5 ರಷ್ಟು ರೋಗಿಗಳಿಗೆ ವೆಂಟಿಲೇಟರ್ ಅಳವಡಿಸಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳಿದೆ. ಇನ್ನುಳಿದ ರೋಗಿಗಳಿಗೆ ಆಕ್ಸಿಜನ್ ಅಥವಾ ವೆಂಟಿಲೇಟರ್ ಎರಡೂ ಬೇಕಾಗುವುದಿಲ್ಲ.
ಆರೋಗ್ಯ ಸಚಿವಾಲಯದ ಅಂದಾಜಿನ ಪ್ರಕಾರ, 200 ಹಾಸಿಗೆಗಳ ಆಸ್ಪತ್ರೆಗೆ ಪ್ರತಿದಿನ 90 ಜಂಬೊ ಸೈಜಿನ ಆಕ್ಸಿಜನ್ ಸಿಲಿಂಡರ್ ಬೇಕಾಗುತ್ತವೆ ಹಾಗೂ ಇನ್ನೂ 90 ಹೆಚ್ಚುವರಿ ಸಿಲಿಂಡರ್ಗಳನ್ನು ತುರ್ತು ಸ್ಥಿತಿ ಎದುರಿಸಲು ಸಂಗ್ರಹಿಸಿ ಇಟ್ಟುಕೊಳ್ಳಬೇಕಾಗುತ್ತದೆ ಎಂದು ತಿಳಿದು ಬಂದಿದೆ. ಒಂದು ಆಕ್ಸಿಜನ್ ಸಿಲಿಂಡರ್ನ ಸಾಮರ್ಥ್ಯ 7.25 ಕ್ಯೂಬಿಕ್ ಮೀಟರ್ ಆಕ್ಸಿಜನ್ ಹಿಡಿಯುವಷ್ಟು ಆಗಿರುತ್ತದೆ.
ಆಕ್ಸಿಜನ್ ಬೆಡ್ ಎಂದರೇನು?
ಪೈಪ್ ಮೂಲಕ ಆಕ್ಸಿಜನ್ ಪೂರೈಕೆಯ ವ್ಯವಸ್ಥೆ, ಆಕ್ಸಿಜನ್ ಕಾನ್ಸಂಟ್ರೇಟರ್ ಅಥವಾ ಆಕ್ಸಿಜನ್ ಸಿಲಿಂಡರ್ಗಳಿರುವ ಬೆಡ್ಗಳನ್ನು ಆಕ್ಸಿಜನ್ ಬೆಡ್ಗಳೆಂದು ಕರೆಯಲಾಗುತ್ತದೆ. ಇಂಥ ಒಂದು ಹೊಸ ಬೆಡ್ ವ್ಯವಸ್ಥೆ ಮಾಡಲು ಅಥವಾ ಇರುವ ಬೆಡ್ಗೆ ಈ ವ್ಯವಸ್ಥೆಗಳನ್ನು ಅಳವಡಿಸಲು ಕೆಲ ಸಾವಿರದಿಂದ ಕೆಲ ಲಕ್ಷ ರೂಪಾಯಿಗಳವರೆಗೆ ಖರ್ಚು ತಗಲುತ್ತದೆ ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಮಾಹಿತಿ ನೀಡಿದರು.
ಸಾಮರ್ಥ್ಯ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಆಧರಿಸಿ ಆಕ್ಸಿಜನ್ ಕಾನ್ಸಂಟ್ರೇಟರ್ ಒಂದರ ಬೆಲೆ 1 ರಿಂದ 3 ಲಕ್ಷ ರೂಪಾಯಿಗಳಾಗುತ್ತದೆ. ಸಿಲಿಂಡರ್ ಒಂದಕ್ಕೆ 7 ರಿಂದ 8 ಸಾವಿರ ರೂಪಾಯಿಗಳಷ್ಟು ಬೆಲೆ ಇದೆ. ಆದರೆ ಅನೇಕ ಬಾರಿ ಸಿಲಿಂಡರ್ಗಳ ಸಮರ್ಪಕ ಪೂರೈಕೆ ಸವಾಲಿನ ವಿಷಯವಾಗುತ್ತದೆ. ಅದರಲ್ಲೂ ಸಾರಿಗೆ ಸಂಪರ್ಕ ಕೊರತೆ ಇರುವ ಪ್ರದೇಶಗಳಲ್ಲಿ ಸಿಲಿಂಡರ್ ಪೂರೈಕೆ ಇನ್ನೂ ಕಷ್ಟಕರ.
ಆಕ್ಸಿಜನ್ ಹಾಗೂ ವೆಂಟಿಲೇಟರ್ ಮೇಲಿದ್ದ ರೋಗಿಗಳ ಅಂಕಿ ಸಂಖ್ಯೆಗಳು
ಮೇ 1 ರಲ್ಲಿದ್ದಂತೆ ದೇಶದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳ ಪೈಕಿ ಶೇ 3.2 ರಷ್ಟು ರೋಗಿಗಳಿಗೆ ಆಕ್ಸಿಜನ್ ಹಾಗೂ 1.1 ರಷ್ಟು ರೋಗಿಗಳಿಗೆ ವೆಂಟಿಲೇಟರ್ ನೀಡಲಾಗಿತ್ತು. ಇದರಲ್ಲಿ ಸಕ್ರಿಯ ಪ್ರಕರಣಗಳನ್ನು ಪರಿಗಣಿಸಿದಲ್ಲಿ, ಶೇ 3.2 ರಷ್ಟು ಸೋಂಕಿತರಿಗೆ ಆಕ್ಸಿಜನ್ ನೀಡಲಾಗಿತ್ತು, ಶೇ 4.7 ರಷ್ಟು ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು ಹಾಗೂ ಶೇ 1.1 ರಷ್ಟು ಸೋಂಕಿತರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಮೇ 1 ರಲ್ಲಿರುವಂತೆ ಭಾರತದಲ್ಲಿ ಒಟ್ಟು 19,398 ವೆಂಟಿಲೇಟರ್ಗಳಿದ್ದವು. ಆದರೆ 75 ಸಾವಿರ ವೆಂಟಿಲೇಟರ್ಗಳಿಗೆ ಬೇಡಿಕೆ ಇತ್ತು. ಸರ್ಕಾರವು 60,884 ವೆಂಟಿಲೇಟರ್ಗಳ ಪೂರೈಕೆಗಾಗಿ ಕಂಪನಿಗಳಿಗೆ ಬೇಡಿಕೆ ಇಟ್ಟಿತ್ತು. ಇದರಲ್ಲಿ 59,884 ವೆಂಟಿಲೇಟರ್ಗಳನ್ನು ಸ್ಥಳೀಯ ಉತ್ಪಾದಕರಾದ ಬಿಇಎಲ್ ಹಾಗೂ ಮಾರುತಿ ಸುಜುಕಿ, ಎಜಿವಿಎ ಮುಂತಾದ ಕಂಪನಿಗಳು ಪೂರೈಸಲಿವೆ.
ಮೇ 1 ರಲ್ಲಿದ್ದಂತೆ ಭಾರತದ ಒಟ್ಟು ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯ 6,400 ಎಂಟಿ ಗಳಷ್ಟಿತ್ತು. ಇದರಲ್ಲಿ 1000 ಎಂಟಿ ಯಷ್ಟು ಆಕ್ಸಿಜನ್ ವೈದ್ಯಕೀಯ ಅಗತ್ಯಗಳಿಗೆ ಬಳಸಲಾಗುತ್ತದೆ. ದೇಶದಲ್ಲಿ 5 ದೊಡ್ಡ ಹಾಗೂ 600 ಸಣ್ಣ ಪ್ರಮಾಣದ ಆಕ್ಸಿಜನ್ ಉತ್ಪಾದಿಸುವ ಕಂಪನಿಗಳಿವೆ. ಇನ್ನು ದೇಶದ 409 ಆಸ್ಪತ್ರೆಗಳು ಸ್ವತಃ ಆಕ್ಸಿಜನ್ ತಯಾರಿಸಿಕೊಳ್ಳುವ ವ್ಯವಸ್ಥೆಯನ್ನು ಹೊಂದಿವೆ.